ರಾಯಚೂರು: 2012-13ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಭಾಷಣ ಸ್ಪರ್ಧೆಯಲ್ಲಿ ಮಾನವಿಯ ಕಾಕತೀಯ ಪ್ರೌಢಶಾಲೆಯ ವಿದ್ಯಾರ್ಥಿನಿ ಉಜ್ಮಾ ಫಿರಾಸತ್ ಮಹ್ಮದ್ ದಾವೂದ್ ಸಿದ್ದಿಖಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಪ್ರತಿಭಾ ಕಾರಂಜಿ ಭಾಷಣ ಸ್ಪರ್ಧೆಯ ಉರ್ದು ವಿಭಾಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರ ತಡೆಯುವಲ್ಲಿ ಯುವಕರ ಪಾತ್ರ ಕುರಿತು ಮಾಡಿದ ಭಾಷಣಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯ ಉರ್ದು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಉಜ್ಮಾ ಫಿರಾಸತ್ ಮಹ್ಮದ್ ದಾವೂದ್ ಸಿದ್ದಿಖಿರನ್ನು ಗುಲ್ಬರ್ಗದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈಚೆಗೆ ಸನ್ಮಾನಿಸಲಾಯಿತು.
ಕರ್ನಾಟಕ ರತ್ನಶ್ರೀ ಪ್ರಶಸ್ತಿಗೆ ಆಯ್ಕೆ
ರಾಯಚೂರು: ನೃಪತುಂಗ ಕಲಾನಿಕೇತನ ಸಂಸ್ಥೆಯು ನೀಡುವ ಕರ್ನಾಟಕ ರತ್ನಶ್ರೀ ಪ್ರಶಸ್ತಿಗೆ ನಗರಸಭೆಯ ಸದಸ್ಯ ಪಿ. ಯಲ್ಲಪ್ಪ ಆಯ್ಕೆಯಾಗಿದ್ದಾರೆ. ಈ ಕುರಿತು ಸಂಸ್ಥೆಯ ಕಾರ್ಯದರ್ಶಿ ಜಿ. ರಘು ಪ್ರಕಟಣೆ ನೀಡಿ, ಜನಪರ ಕಾರ್ಯ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಫೆ.7ರಂದು ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.