ತೆರಿಗೆ ನಿಗದಿಯಲ್ಲಿ ಲೋಪ: ಸರ್ಕಾರಕ್ಕೆ ದೂರು

Updated on: 

ರಾಯಚೂರು: ಸ್ಥಳೀಯ ನಗರಸಭೆಯು ತೆರಿಗೆ ನಿಗದಿ ಮತ್ತು ವಸೂಲಿಯಲ್ಲಿ ಮಾಡಿರುವ ಲೋಪ ಮತ್ತು ಅನಧಿಕೃತ ಅಪಾರ್ಟ್‌ಮೆಂಟ್‌ಗಳ ವಿರುದ್ಧ ಕೈಗೊಳ್ಳುವಲ್ಲಿ ವಿಫಲವಾಗಿರುವುದರ ವಿರುದ್ಧ ಶೀಘ್ರದಲ್ಲಿಯೇ ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಸಲಾಗುತ್ತದೆ. ಅದೇ ರೀತಿ ನ್ಯಾಯಾಲಯದಲ್ಲಿ ಆಡಳಿತದ ವಿರುದ್ಧ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಹೈ.ಕ. ವಿಮೋಚನಾ ವೇದಿಕೆಯ ಮುಖಂಡ ಅಂಬಣ್ಣ ಅರೋಲಿ ಹೇಳಿದರು.
ಅವರು ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ನವೋದಯ ಮೆಡಿಕಲ್ ಕಾಲೇಜು ಆವರಣ 48 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ನವೋದಯ ಶಿಕ್ಷಣ ಸಂಸ್ಥೆಯಿಂದ ನಗರಸಭೆಯು ತೆರಿಗೆ ಸಂಗ್ರಹಿಸುವಲ್ಲಿ ನಿರ್ಲಕ್ಷ್ಯ ತೋರಿದ್ದನ್ನು ಖಂಡಿಸಿ ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದರಿಂದ ನಗರಸಭೆಯು ತೆರಿಗೆ ಸಂಗ್ರಹಿಸಲು ಮುಂದಾಗಿದೆ.
ಕಡಿಮೆ ತೆರಿಗೆ ಸಂಗ್ರಹ: ಆದರೆ ತೆರಿಗೆ ನಿಗದಿ ಮಾಡುವಲ್ಲಿಯೂ ಆಡಳಿತ ಜನತೆಯನ್ನು ವಂಚಿಸಿದೆ ಎಂದು ದೂರಿದರು. 48ಎಕರೆ ಪ್ರದೇಶಕ್ಕೆ ಕನಿಷ್ಟ ರು. 4.50ಕೋಟಿ ತೆರಿಗೆ ನಿಗದಿ ಮಾಡಿ ವಸೂಲು ಮಾಡಬೇಕಿದ್ದ ನಗರಸಭೆ ಅಧಿಕಾರಿಗಳು ನವೋದಯ ಮೆಡಿಕಲ್ ಕಾಲೇಜಿನ ಕೆಲವೇ ಕೆಲ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಮೂಲಕ ಕೇವಲ ರು. 90 ಲಕ್ಷ ತೆರಿಗೆ ಸಂಗ್ರಹಿಸಿರುವುದು ದಾಖಲೆಗಳಿಂದ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಇದೇ ರೀತಿ ನಗರಸಭೆಯ ಆಡಳಿತವು ಕಚ್ಚಾ ಪಕ್ಕಾ ಮನೆಗಳ ಹಂಚಿಕೆ, ಶೇ.22.75 ಅನುದಾನದ ಬಳಕೆ ಸೇರಿದಂತೆ ವಿವಿಧ ಯೋಜನೆಗಳಡಿ ಅಕ್ರಮ ನಡೆಸಿದ್ದು, ಈ ಬಗ್ಗೆ ಸಂಘಟನೆಗಳು ಹೋರಾಟ ನಡೆಸಿ ಮನವಿ ಸಲ್ಲಿಸಿ ಅಕ್ರಮ ಸಾಬೀತು ಮಾಡಿದ್ದರೂ ಜಿಲ್ಲಾಧಿಕಾರಿಗಳು ಮೌನವಹಿಸಿದ್ದು, ನಗರಸಭೆಯ ಅಧಿಕಾರಿಗಳ ರಕ್ಷಣೆಗೆ ಜಿಲ್ಲಾಡಳಿತವೇ ನಿಂತಿರುವುದನ್ನು ಸ್ಪಷ್ಟಪಡಿಸಿದೆ ಎಂದು ಟೀಕಿಸಿದರು.
ಅಧಿಕಾರಿಗಳ ಶಾಮೀಲು: ನಗರದಲ್ಲಿ ಅನಧಿಕೃತ ಹಾಗೂ ವಿವಿಧ ವಿನ್ಯಾಸಗಳಲ್ಲಿ 19 ಅಪಾರ್ಟ್‌ಮೆಂಟ್ ಗಳು ತಲೆ ಎತ್ತಿವೆ. ಈ ಬೃಹತ್ ವಸತಿ ಸಮುಚ್ಛಯಗಳಲ್ಲಿ ನಿವಾಸಿಗಳ ರಕ್ಷಣೆಗೆ ಅಗತ್ಯ ಸೌಲತ್ತುಗಳೇ ಒದಗಿಸಿಲ್ಲ. ಸರ್ಕಾರಿ ಜಾಗೆಯಲ್ಲಿ ಇಂಥ ಕಟ್ಟಡಗಳು ನಿರ್ಮಾಣಗೊಂಡಿವೆ. ಈ ಬಗ್ಗೆ ಅನೇಕ ಬಾರಿ ನಗರಸಭೆಯ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿಗಳೂ ಸಹ ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸಿದರು.
ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು 2012ರ ನ.27ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಇಂಥ ಅಕ್ರಮ ಕಟ್ಟಡಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮಕ್ಕೆ ನೆರವಾದ ನಗರಸಭೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಲು ಆದೇಶಿಸಿದ್ದಾರೆ. ಆದರೆ ಜಿಲ್ಲಾಧಿಕಾರಿ ಎಂ.ವಿ.ಸಾವಿತ್ರಿ ಅವರು ಈ ಪತ್ರಕ್ಕೆ ಇದುವರೆಗೆ ಪ್ರತಿಕ್ರಿಯಿಸಿಲ್ಲ. ಕ್ರಮವನ್ನೂ ತೆಗೆದುಕೊಂಡಿಲ್ಲ ಎಂದು ದೂರಿದರು.
ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ಶೀಘ್ರದಲ್ಲಿಯೇ ವಿವಿಧ ಸಂಘಟನೆಗಳ ನಿಯೋಗಮೊಂದು ನಗರಾಭಿವೃದ್ಧಿ ಇಲಾಖೆಗೆ ದೂರು ಸಲ್ಲಿಸಲಿದೆ. ಅದೇ ರೀತಿ ನ್ಯಾಯಾಲಯದಲ್ಲಿಯೂ ಕ್ರಮಕ್ಕೆ ಆಗ್ರಹಿಸಿ ಮೊಕದ್ದಮೆ ದಾಖಲಿಸುವುದಾಗಿ ಅವರು ಹೇಳಿದರು.   ವಿವಿಧ ಸಂಘಟನೆಗಳ ಪ್ರಮುಖರಾದ ಜೆ.ಬಿ.ರಾಜು, ಅಶೋಕ ಕುಮಾರ್ ಜೈನ್, ರಾಜೇಶ್ ಅನೇಕರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com