ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಂಡಿಸಿದ ಬಜೆಟ್ ಜನಸಾಮಾನ್ಯರಿಗೆ ಅಗತ್ಯವಿರುವ ಕುಡಿವ ನೀರು, ಶಿಕ್ಷಣ, ರಸ್ತೆ, ನೀರಾವರಿ ಸೇರಿದಂತೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡದ ಬಜೆಟ್ ಆಗಿದೆ.
-ಶರಣಪ್ಪ ಮೇಟಿ, ಲಿಂಗಸ್ಗೂರು ಕಾಂಗ್ರೆಸ್
ಮುಖ್ಯಮಂತ್ರಿ ಶೆಟ್ಟರ್ ಮಂಡಿಸಿದ ಬಜೆಟ್ ರೈತರ ಹಾಗೂ ಜನಸಾಮಾನ್ಯರ ಅಭಿವೃದ್ಧಿಗೆ ಪೂರಕವಾಗಿದೆ. ಮಠ-ಮಾನ್ಯಗಳ ಅಭಿವೃದ್ಧಿ ಹಾಗೂ ಕೊರಮ ಸಮಾಜಕ್ಕೆ ಪ್ರತ್ಯೇಕ ಸಂಸ್ಥೆ ರಚನೆ ಮಾಡಿದೆ. ಮಹತ್ತರ ಬಜೆಟ್ ಇದಾಗಿದೆ
- ರಮೇಶ ಜೋಷಿ, ತಾಲೂಕು ಬಿಜೆಪಿ
ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್ ಅರ್ಥವಿಲ್ಲದ ಹಾಗೂ ರಾಜಕೀಯ ಪ್ರೇರಿತವಾಗಿದೆ. ಇದು ಅಭಿವೃದ್ಧಿ ಪರವಾಗಿಲ್ಲ. ಹೈ.ಕ.ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಕಾನೂನು ರೂಪಿಸುವಲ್ಲಿ ವಿಳಂಬ ಮಾಡುತ್ತಿದೆ
-ಬಸವಂತರಾಯ ಕುರಿ, ಲಿಂಗಸ್ಗೂರು
ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ರೈತರ ಹಾಗೂ ನೀರಾವರಿ ಯೋಜನೆ ಕಡೆಗಣಿಸಿದೆ. ಹೈ.ಕ. ಭಾಗದ ಒಣ ಬೇಸಾಯಗಾರರಿಗೆ ಹಾಗೂ ಪಂಪ್ಸೆಟ್ ಹೊಂದಿದ ರೈತರಿಗೆ ಅನ್ಯಾಯವಾಗಿದ್ದು, ತಂತ್ರಗಾರಿಕೆ ಬಜೆಟ್ ಇದಾಗಿದೆ.
-ಅಮರಣ್ಣ ಗುಡಿಹಾಳ, ರಾಜ್ಯ ರೈತ ಸಂಘ
ರಾಜ್ಯದ ರೈತರಿಗೆ, ಕೂಲಿ-ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ರಸ್ತೆ, ಕುಡಿವ ನೀರು, ಶಿಕ್ಷಣ, ನೀರಾವರಿ ಸೇರಿದಂತೆ ಎಲ್ಲ ರಂಗಗಳಲ್ಲಿ ಆದ್ಯತೆ ನೀಡಿದರೂ ಕಾರ್ಯಗತವಾಗದ ಬಜೆಟ್ ಆಗಿದೆ.
- ಪುರದಪ್ಪ ವಕೀಲರು
ಯಾದಗಿರಿ ಜಿಲ್ಲೆಯ 3 ತಾಲೂಕು ಸೇರಿ ರಾಜ್ಯದಲ್ಲಿ 43 ಹೊಸ ತಾಲೂಕುಗಳ ರಚನೆಗೆ ಒಪ್ಪಿಗೆ ದೊರೆತಿರುವುದು ಇತಿಹಾಸ. ರೈತಪರ ಬಜೆಟ್ ಇದು. ಸಿಎಂ ಶೆಟ್ಟರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
-ರಾಜುಗೌಡ, ಸಣ್ಣ ಕೈಗಾರಿಕಾ ಸಚಿವ
ವಡಗೇರಾ ತಾಲೂಕು ರಚನೆ ಮಾಡಿದ್ದಕ್ಕೆ ಆಭಾರಿಯಾಗಿದ್ದೇನೆ. ಆದರೆ ಬಹುಸಂ ಖ್ಯೆಯಲ್ಲಿರುವ ಬಂಜಾರಾ ಸಮುದಾಯಕ್ಕಾಗಿ ಸೇವಾಲಾಲ ಜಯಂತಿಯನ್ನು ಸರ್ಕಾರವೇ ಆಚರಿಸುವ ನಿರ್ಧಾರ ಕೈಗೊಂಡಿಲ್ಲ.
-ಡಾ. ಎ.ಬಿ. ಮಾಲಕರೆಡ್ಡಿ, ಶಾಸಕರು
3 ಹೊಸ ತಾಲೂಕು ರಚಿಸಿದ್ದು ಬಿಟ್ಟರೆ ಜಿಲ್ಲೆಗೆ ಯಾವ ಕೊಡುಗೆಯೂ ಸಿಕ್ಕಿಲ್ಲ. ಇದು ಹಿಂದಿನ ಬಜೆಟ್ನ ಪ್ರತಿರೂಪದಂತಿದೆ. ಬಜೆಟ್ ಗಾತ್ರ ಹೆಚ್ಚಾಗಿದೆಯೇ ಹೊರತು ಅದರಿಂದ ಲಾಭವೇನು? ಇದು ಪಕ್ಕಾ ಚುನಾವಣಾ ಗಿಮಿಕ್.
-ಚೆನ್ನಾರೆಡ್ಡಿ ತುನ್ನೂರ, ಮಾಜಿ ಎಂಎಲ್ಸಿ
ಸರ್ಕಾರ ನೂತನ ತಾಲೂಕು ಕೇಂದ್ರಗಳನ್ನು ಘೋಷಿಸಿದೆ. ಆದರೆ ಅವುಗಳಿಗೆ ಸೌಲಭ್ಯ ಒದಗಿಸುವುದು, ಅನುಷ್ಠಾನ ಅಸಾಧ್ಯದ ಮಾತು. ಬಜೆಟ್ನಲ್ಲಿನ ಭರವಸೆಗಳು ಈಡೇರುವುದಿಲ್ಲ. ಇದು ಬಿಜೆಪಿಯ ಚುನಾವಣೆ ಗಿಮಿಕ್ ಅಷ್ಟೇ.
-ಶಿವಶಂಕರ್, ಜೆಡಿಎಸ್ ಕಾರ್ಯದರ್ಶಿ
ಸಿರವಾರ ಮತ್ತು ಮಸ್ಕಿ ತಾಲೂಕು ಘೋಷಣೆ ಮಾಡಿದ್ದು ಸಾಧನೆ. ಅದನ್ನು ಬಿಟ್ಟರೆ ಜಿಲ್ಲೆಯ ಜನರ ನಿರೀಕ್ಷೆಗೆ ಬಜೆಟ್ನಲ್ಲಿ ಉತ್ತರವಿಲ್ಲ. ಸರ್ಕಾರಿ ನೌಕರರಿಗೆ ವಿಶೇಷವಾದ ಘೋಷಣೆಗಳಿಲ್ಲ.
- ಮಹೆಬೂಬ್ ಪಾಷಾ ಮೂಲಿಮನಿ,
ಜಿಲ್ಲಾ ಸರ್ಕಾರಿ ನೌಕರರ ಸಂಘ