ರಾಯಚೂರು: ಸರ್ಕಾರ ಅಗತ್ಯ ವಸ್ತುಗಳ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ನಿಯಂತ್ರಣದಲ್ಲಿ ವಿಫಲವಾಗಿರುವುದು ಸೇರಿ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಫೆ.20 ಮತ್ತು 21ರಂದು 2 ದಿನಗಳ ಕಾಲ ಕಾರ್ಮಿಕ ಸಂಘಟನೆಗಳ ವತಿಯಿಂದ ಐಕ್ಯ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಸಹಕರಿಸುವಂತೆ ಕೇಂದ್ರೀಯ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಜಿಲ್ಲಾ ಮುಖಂಡ ಚನ್ನಬಸಯ್ಯ ಮನವಿ ಮಾಡಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಕಾರ್ಮಿಕ ಚಳವಳಿಯ ಇತಿಹಾಸದಲ್ಲಿ ಎಲ್ಲ ಕೇಂದ್ರ ಕಾರ್ಮಿಕ ಸಂಘಟನೆಗಳು ಒಂದೇ ವೇದಿಕೆಗೆ ಬಂದಿರುವುದು ಕಾರ್ಮಿಕರ ಐಕ್ಯತೆಗೆ ನಾಂದಿ ಹಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತಷ್ಟು ತೀವ್ರಗೊಳ್ಳುವಂತೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆರೋಪಿಸಿದರು.
ಸರ್ಕಾರಗಳು ವಿಫಲ: ಬೆಲೆಯೇರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಮೂಲಕ ಕಾರ್ಮಿಕರಿಗೆ ಮತ್ತಷ್ಟು ತೊಂದರೆದಾಯಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟೀಕಿಸಿದರು.
ಕೇಂದ್ರದ ನಿರ್ಧಾರದಿಂದ ಚಿಲ್ಲರೆ ವ್ಯಾಪಾರದಲ್ಲಿ ತೊಡಗಿರುವ 4 ಕೋಟಿಗೂ ಅಧಿಕ ಕುಟುಂಬಗಳು ಉಪಜೀವನದ ಆಧಾರವನ್ನು ಕಳೆದುಕೊಂಡು ನಿರುದ್ಯೋಗಿಗಳಾಗುವ ಭೀತಿಯಿದೆ. ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸದೆ ಸಾಮಾಜಿಕ ಭದ್ರತೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಡಿಯಲ್ಲಿ ಗುತ್ತಿಗೆ ಪದ್ಧತಿಯಲ್ಲಿ ದುಡಿಯುವ ಕಾರ್ಮಿಕರನ್ನು ಒಳಗೊಂಡು ಸಾರ್ವಜನಿಕ ಕ್ಷೇತ್ರದ ಹಾಗೂ ಖಾಸಗಿ ರಂಗದ ಕೈಗಾರಿಕೆಗಳಲ್ಲಿಯೂ ಕನಿಷ್ಠ ವೇತನ, ಭವಿಷ್ಯನಿಧಿ, ಇಎಸ್ಐ, ಬೋನಸ್ ಮತ್ತು ಗ್ರಾಚ್ಯುಟಿ ಸೌಲಭ್ಯಗಳನ್ನು ಜಾರಿಗೊಳಿಸದೇ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.
ಸೌಲಭ್ಯ ನೀಡುವಲ್ಲೂ ಮೀನಮೇಷ: ಉದ್ಯೋಗ ಸೃಷ್ಟಿ ಯೋಜನೆಗಳು ಜಾರಿಗೆ ಬರುತ್ತಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳಾದ ಅಂಗನವಾಡಿ, ಆಶಾ, ಬಿಸಿಯೂಟ ಹಾಗೂ ಸರ್ವಶಿಕ್ಷಣ ಅಭಿಯಾನದಡಿ ಲಕ್ಷಾಂತರ ಕೆಲಸಗಾರರು ದುಡಿಯುತ್ತಿದ್ದರೂ ಅವರಿಗೆ ಕನಿಷ್ಠ ವೇತನ ಹಾಗೂ ಕಾರ್ಮಿಕ ಹಕ್ಕುಗಳನ್ನು ಅನುಸಾರ ಸೌಲಭ್ಯ ನೀಡುವಲ್ಲಿ ಸರ್ಕಾರಗಳು ಮೀನಮೇಷ ಎಣಿಸುತ್ತಿವೆ ಎಂದು ಆರೋಪಿಸಿದರು.
ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಮಾಡಿದ ಕಾನೂನು ಜಾರಿಗೆ ಅಗತ್ಯ ಕಾರ್ಮಿಕರ ಸಂಘಟನಾ ಹಕ್ಕನ್ನು ಮೊಟಕುಗೊಳಿಸಲು ಬಹುರಾಷ್ಟ್ರೀಯ ಕಂಪನಿಗಳು ದಾಳಿ ನಡೆಸುತ್ತಿದ್ದು, ಸರ್ಕಾರಗಳು ವಿದೇಶಿ ಹಾಗೂ ದೇಶಿಯ ಬಂಡವಾಳಗಾರರೊಂದಿಗೆ ಶಾಮೀಲಾಗಿ ಕಾರ್ಮಿಕರ ಹಕ್ಕುಗಳ ಮೇಲೆ ದಾಳಿ ನಡೆಸುತ್ತಿವೆ. ಬೆಲೆ ಏರಿಕೆ ನಿಯಂತ್ರಿಸಬೇಕು. ಬಿಪಿಎಲ್ ಮತ್ತು ಎಪಿಎಲ್ ಎಂದು ಜನರನ್ನು ವಿಂಗಡಿಸುವುದು ಕೈಬಿಟ್ಟು ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಎಫ್ಡಿಐ ರದ್ದುಗೊಳಿಸಿ: ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ರದ್ದುಗೊಳಿಸಬೇಕು. ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಸಾರ್ವತ್ರಿಕವಾಗಿ ಎಲ್ಲ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಲು ರಾಷ್ಟ್ರೀಯ ಸಾಮಾಜಿಕ ಸುರಕ್ಷತಾ ನಿಧಿ ಸ್ಥಾಪಿಸಿ ಅಗತ್ಯ ಹಣಕಾಸು ಸಂಪನ್ಮೂಲ ಒದಗಿಸಬೇಕು ಎಂದು ಒತ್ತಾಯಿಸಿದರು.
ಕೈಗಾರಿಕಾ ಅಭಿವೃದ್ಧಿ ಹೆಸರಿನಲ್ಲಿ ಭೂಮಿ ಕಳೆದುಕೊಂಡವರಿಗೆ ನ್ಯಾಯಯುತ ಬೆಲೆ ನೀಡಬೇಕು, ಅವರನ್ನು ಕೈಗಾರಿಕಾ ಪಾಲುದಾರರಂತೆ ಪರಿಗಣಿಸಬೇಕು. ಜಿಲ್ಲೆಯಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ಸ್ಥಾಪಿಸಬೇಕು. ಉದ್ಯೋಗ ಮೀಸಲಾತಿ ಒಳಗೊಂಡಂತೆ ಸಂವಿಧಾನದ 371(ಜೆ)ನೇ ಕಲಂ ಜಾರಿಗೊಳಿಸಿ ಸಮರ್ಪಕ ಅನುದಾನ ನೀಡಿ ಅಭಿವೃದ್ಧಿ ಕಾಮಗಾರಿ ತೀವ್ರಗೊಳಿಸಬೇಕೆಂದು ಮುಷ್ಕರದ ವೇಳೆ ಆಗ್ರಹಿಸಲಾಗುತ್ತದೆ ಎಂದರು.
ಮೆರವಣಿಗೆ, ಬಹಿರಂಗ ಸಭೆ: ಫೆ. 20ರಂದು ನಗರದ ಗಾಂಧಿ ಚೌಕ್ನಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸೂಪರ್ ಮಾರ್ಕೆಟ್ ಬಳಿ ಬಹಿರಂಗ ಸಭೆ ಆಯೋಜಿಸಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಮುಷ್ಕರಕ್ಕೆ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು, ಕಾರ್ಮಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಎಐಟಿಯುಸಿಯ ಶೌಕತ್ ಅಲಿ, ಸಿಐಟಿಯುನ ಪದ್ಮಾ, ಎಐಯುಟಿಯುಸಿಯ ಎನ್.ಎಸ್. ವೀರೇಶ, ಎಐಎಫ್ಟಿಯು ವಿ.ಎಚ್. ಮಾಸ್ತರ್, ಎಐಐಇಎನ ರವಿ, ಬಿಎಸ್ಸೆನ್ನೆಲ್ನ ಆದೆಪ್ಪ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಮಹೆಬೂಬ್ ಪಾಷಾ ಮೂಲಿಮನಿ ಇದ್ದರು.