ಬೀದರ್: ಮಾಜಿ ಮುಖ್ಯಮಂತ್ರಿ ಹಾಗೂ ಕರ್ನಾಟಕ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಫೆ.19ರಂದು ಬೀದರ್ ಪ್ರವಾಸ ಕೈಗೊಂಡಿದ್ದಾರೆ.
ಈ ಕುರಿತು ಪಕ್ಷದ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಸೋಮನಾಥ ಪಾಟೀಲ್ ಪ್ರಕಟಣೆ ಹೊರಡಿಸಿದ್ದು, ಫೆ. 19ರಂದು ಬೆಳಿಗ್ಗೆ 9.30ಕ್ಕೆ ಗುಲ್ಬರ್ಗದಿಂದ ಹೆಲಿಕಾಪ್ಟರ್ ಮೂಲಕ ಬೀದರ್ಗೆ ಆಗಮಿಸುವರು. ಅಂದು ಬೀದರ್ನ ಶಿವನಗರದ ಪಾಪನಾಶ ಗೇಟ್ ಹತ್ತಿರ ನಿರ್ಮಾಣಗೊಂಡಿರುವ ನೂತನ ಕಟ್ಟಡದಲ್ಲಿ ಜಿಲ್ಲಾ ಕೆಜೆಪಿ ಕಚೇರಿಯನ್ನು ಉದ್ಘಾಟಿಸುವರು.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೆಜೆಪಿ ರಾಜ್ಯ ಉಪಾಧ್ಯಕ್ಷರಾದ ಗುರುಪಾದಪ್ಪ ನಾಗಮಾರಪಳ್ಳಿ ಹಾಗೂ ಸುಭಾಷ ಕಲ್ಲೂರ್, ರಾಜ್ಯ ಕಾರ್ಯದರ್ಶಿ ಶಕುಂತಲಾ ಬೆಲ್ದಾಳೆ, ವಿಭಾಗೀಯ ಕಾರ್ಯದರ್ಶಿ ಸುಭಾಷ ಬಿರಾದಾರ, ಜಿಲ್ಲಾಧ್ಯಕ್ಷ ವಿಜಯಕುಮಾರ ಕಣಜಿ, ಪ್ರಚಾರ ಸಮಿತಿ ಅಧ್ಯಕ್ಷ ಸೋಮನಾಥ ಸೋಲಾಪುರೆ, ಪಕ್ಷದ ಎಲ್ಲಾ ಘೋಷಿತ ಅಭ್ಯರ್ಥಿಗಳು ಪಾಲ್ಗೊಳ್ಳುವರು.
ಪಕ್ಷದ ಎಲ್ಲಾ ಜಿಲ್ಲಾ ಪದಾಧಿಕಾರಿಗಳು, ಘಟಕ ಹಾಗೂ ತಾಲೂಕಾ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಬೇಕೆಂದು ಪಾಟೀಲ್ ಕೋರಿದ್ದಾರೆ.