15 ದಿನದಲ್ಲಿ ಆರ್ಟಿಪಿಎಸ್ 8ನೇ ಘಟಕ ಶುರು

Updated on: 

ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 8ನೇ ಘಟಕದಲ್ಲಿ ನಡೆದ ಅವಘಡದಿಂದ ಆಗಿರುವ ಆರ್ಥಿಕ ನಷ್ಟದ ಹೊರೆ ಕಡಿಮೆಗೊಳಿಸುವುದು, ವಿದ್ಯುತ್ ಅಭಾವದ ಸಮಸ್ಯೆ ನೀಗಿಸುವುದು, ಆದಾಯದಲ್ಲಿ ಆಗುತ್ತಿರುವ ಖೋತಾ ಸರಿದೂಗಿಸುವುದೇ ಕೆಪಿಸಿಯ ಮೊದಲಾದ್ಯತೆಯಾಗಿದೆ. ಈ ನಿಟ್ಟಿನಲ್ಲಿಯೇ ಸದ್ಯಕ್ಕೆ ಚಿಂತನೆ ನಡೆಸಿರುವ ಕೆಪಿಸಿ 8ನೇ ಘಟಕವನ್ನು ಮುಂದಿನ 15 ದಿನದಲ್ಲಿ ವಿದ್ಯುತ್ ಉತ್ಪಾದನೆಗೆ ತೊಡಗಿಸಲು ಅಗತ್ಯ ಮಾರ್ಗೋಪಾಯ ಕಂಡುಕೊಳ್ಳಲು ಮುಂದಾಗಿದೆ.
ಕಳೆದ ಭಾನುವಾರ ಆರ್ಟಿಪಿಎಸ್ನ 8ನೇ ಘಟಕದ ಎಲೆಕ್ಟ್ರೋ ಸ್ಟ್ಯಾಟಿಕ್ ಪ್ರೆಸಿಪಿಟೇಟರ್ ಯಂತ್ರದ ಕುಸಿತದಿಂದ ವಿದ್ಯುತ್ ಸ್ಥಗಿತಗೊಂಡಿದೆ. 8ನೇ ಘಟಕ ಕಾರ್ಯ ಸ್ಥಗಿತಗೊಳಿಸಿರುವುದರಿಂದ ಒಂದೆಡೆ ರಾಜ್ಯದಲ್ಲಿನ ವಿದ್ಯುತ್ ಅಭಾವದ ಭೀತಿಯ ಒತ್ತಡವಾದರೆ, ಮತ್ತೊಂದೆಡೆ ಈ ಘಟಕದ ಕಾರ್ಯನಿರ್ವಹಣೆಯಿಂದ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಅವಘಡಕ್ಕೆ ಕಾರಣ ಹುಡುಕುವುದನ್ನು ಸದ್ಯಕ್ಕೆ ಬದಿಗಿರಿಸಲು ಕೆಪಿಸಿ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಆರ್ಥಿಕವಾಗಿ ಸಂಕಷ್ಟ: ರಾಜ್ಯದ ಬೇಡಿಕೆಯ ಶೇ.40ರಷ್ಟು ವಿದ್ಯುತ್ ಒದಗಿಸುವ ಆರ್ಟಿಪಿಎಸ್ನ 8 ಘಟಕಗಳಲ್ಲಿ ಸದ್ಯ 7 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳೂ ಪೂರ್ಣ ಸಾಮರ್ಥ್ಯ (210 ಮೆ.ವ್ಯಾ)ದಲ್ಲಿ  ವಿದ್ಯುತ್ ಉತ್ಪಾದಿಸುತ್ತಿಲ್ಲ. ಈ ಮಧ್ಯೆ 8ನೇ ಘಟಕವು ಉತ್ಪಾದನೆ ಸ್ಥಗಿತಗೊಳಿಸಿರುವುದು ಕೆಪಿಸಿಗೆ ಆರ್ಥಿಕವಾಗಿ ಭಾರೀ ಸಂಕಷ್ಟ ತಂದೊಡ್ಡಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ರಾಜ್ಯದ ವಿವಿಧೆಡೆಯ ಎಸ್ಕಾಂಗಳು ಕೆಪಿಸಿಗೆ 1,800ರಿಂದ 2 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡಿವೆ ಎಂದು ಗೊತ್ತಾಗಿದ್ದು, ಈ ಮಧ್ಯೆ 8ನೇ ಘಟಕದ ನಿರ್ಮಾಣಕ್ಕಾಗಿ 1,050 ಕೋಟಿಯನ್ನು ಕೆಪಿಸಿಯು ಬಿಎಚ್ಇಎಲ್ ಜತೆ 50:50ರ ಅನುಪಾತದಲ್ಲಿ ವೆಚ್ಚ ಮಾಡಿದೆ. ವಿದ್ಯುತ್ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಮೂರು ವರ್ಷಗಳಲ್ಲಿಯೇ ಕೆಪಿಸಿ ಹೂಡಿದ ಬಂಡವಾಳ ಹಿಂದಿರುಗಿರುತ್ತಿತ್ತು.
ಆದರೆ 8ನೇ ಘಟಕದ ನಿರ್ಮಾಣ ಹಂತದಿಂದಲೇ ಸಾಕಷ್ಟು ವಿಳಂಬವಾಗಿ ಕೊನೆಗೆ ಕಳೆದ ವರ್ಷ ಇನ್ನೇನು ವಿದ್ಯುತ್ ಉತ್ಪಾದನೆ ಆರಂಭಿಸುತ್ತದೆ ಎನ್ನುವಾಗಲೇ ಟರ್ಬೈನ್ನಲ್ಲಿ ದೋಷ ಕಂಡುಬಂದಿದ್ದರಿಂದ ವಿದ್ಯುತ್ ಉತ್ಪಾದನೆಗೆ ಹಿನ್ನಡೆಯಾಗಿತ್ತು.
8ನೇ ಘಟಕದ ಉತ್ಪಾದನೆ ವಿಳಂಬದಿಂದ ಈಗಾಗಲೇ ಕೆಪಿಸಿಗೆ ಆರ್ಥಿಕವಾಗಿ ಸಾಕಷ್ಟು ಹೊರೆ ಬಿದ್ದಿದೆ. ಈ ಘಟಕ ಕಳೆದ ನವೆಂಬರ್ ನಂತರದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿತ್ತು. ಆದರೆ ಭಾನುವಾರದ ಅವಘಡದಿಂದಾಗಿ ಮತ್ತೆ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ.
ತಜ್ಞರೊಂದಿಗೆ ಸಮಾಲೋಚನೆ: ಈ ಕುರಿತು ಮಂಗಳವಾರ ಕೆಪಿಸಿ ತಾಂತ್ರಿಕ ನಿರ್ದೇಶಕ ನಾರಾಯಣ ಪ್ರಸಾದ್ ಅವರು “OÚ«Ú­sÚ®Úúڒ¥æàM¦Væ ಮಾತನಾಡಿ, 8ನೇ ಘಟಕದ ಇಎಸ್ಪಿ ಯಂತ್ರದ ಮಾರ್ಗಗಳ ಕುಸಿತದಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಬಿಎಚ್ಇಎಲ್ ತಜ್ಞರೊಂದಿಗೆ ಸಮಾಲೋಚಿಸಲಾಗಿದೆ. ಅವಘಡದ ವೇಳೆ ಈ ಬೂದಿ ನಿರ್ವಹಣೆಯ ಒಟ್ಟು 4 ಮಾರ್ಗಗಳಲ್ಲಿ ಎರಡು ಸಂಪೂರ್ಣ ಹಾನಿಗೀಡಾಗಿದ್ದು, ಇನ್ನುಳಿದ ಎರಡು ಮಾರ್ಗಗಳನ್ನು ಬಳಸಿ ವಿದ್ಯುತ್ ಉತ್ಪಾದಿಸಬಹುದಾಗಿದೆ ಎಂದು ಹೇಳಿದರು.
ಎರಡು ಮಾರ್ಗಗಳ ಸುಸ್ಥಿತಿಯ ಪರೀಕ್ಷೆ ನಂತರ 8ನೇ ಘಟಕವನ್ನು ವಿದ್ಯುತ್ ಉತ್ಪಾದನೆಗೆ ತೊಡಗಿಸಲಾಗುತ್ತದೆ. ಅದಕ್ಕೆ ಕನಿಷ್ಠ 15 ದಿನಗಳಾದರೂ ಹಿಡಿಯುತ್ತದೆ ಎಂದು ತಿಳಿಸಿ, ಬಿಎಚ್ಇಎಲ್ ತಜ್ಞರು ಘಟಕವನ್ನು ವಿದ್ಯುತ್ ಉತ್ಪಾದನೆಗೆ ತೊಡಗಿಸಲು ಸಮ್ಮತಿಸಿದ್ದಾರೆ ಎಂದು ಹೇಳಿದರು.
ವಿದ್ಯುತ್ನ ತೀವ್ರ ಅಭಾವ: ರಾಜ್ಯವು ಬೇಸಿಗೆಯ ಈ ದಿನಗಳಲ್ಲಿ ವಿದ್ಯುತ್ನ ತೀವ್ರ ಅಭಾವ ಎದುರಿಸುತ್ತಿದೆ. 8ನೇ ಘಟಕವನ್ನು ಮುಂದಿನ 15 ದಿನಗಳಲ್ಲಿ ಉತ್ಪಾದನೆಗೆ ತೊಡಗಿಸಿದಲ್ಲಿ ಕನಿಷ್ಠ 130ರಿಂದ 150 ಮೆವ್ಯಾ ವಿದ್ಯುತ್ ಉತ್ಪಾದಿಸಬಹುದಾಗಿದೆ ಎಂಬುದು ತಜ್ಞರ ಅಭಿಪ್ರಾಯ.
ಆ ಮೂಲಕ ಕೆಪಿಸಿಗೆ ಘಟಕದ ಪುನಾರಂಭ ತಡವಾಗುವುದರಿಂದ ಆಗುವ ಆರ್ಥಿಕ ನಷ್ಟ ಕಡಿಮೆಯಾಗಲಿದೆ. ಜತೆಗೆ ರಾಜ್ಯಕ್ಕೆ ಸಂಕಷ್ಟದ ಕಾಲದಲ್ಲಿ ವಿದ್ಯುತ್ ಒದಗಿಸಿದರೆಂಬ ಹೆಸರು ಗಳಿಕೆ ಲೆಕ್ಕಾಚಾರದಲ್ಲಿ ಕೆಪಿಸಿ ಅಧಿಕಾರಿಗಳಿದ್ದಾರೆ. ಈ ಮಧ್ಯೆ ಬಿಎಚ್ಇಎಲ್ನ ತಮಿಳುನಾಡಿನ ರಾಣಿಪೇಟೆ ಘಟಕದ 6 ಜನ ತಜ್ಞರ ತಂಡವು ಸೋಮವಾರ ರಾತ್ರಿ ಆರ್ಟಿಪಿಎಸ್ಗೆ ಆಗಮಿಸಿ ಮಂಗಳವಾರ ಬೆಳಗ್ಗೆ 8ನೇ ಘಟಕದ ಕುಸಿದ ಬೂದಿ ನಿರ್ವಹಣೆ ಭಾಗವನ್ನು ಪರಿಶೀಲಿಸಿದೆ.
ನಂತರ ಶಕ್ತಿನಗರದ ಅತಿಥಿಗೃಹದಲ್ಲಿ ಆರ್ಟಿಪಿಎಸ್ ತಾಂತ್ರಿಕ ನಿರ್ದೇಶಕ ನಾರಾಯಣಪ್ರಸಾದ್, ಇಡಿ ಭಾಸ್ಕರ್ ಅವರ ಜತೆ ಬಿಎಚ್ಇಎಲ್ನ ತಂಡವು ಉದ್ಭವಿಸಿರುವ ಸಮಸ್ಯೆ ಕುರಿತು ಹಾಗೂ ಪರಿಹಾರೋಪಾಯಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿದೆ.
ಇನ್ನೆರಡು ಮಾರ್ಗ ಬಳಕೆಗೆ ಯೋಗ್ಯ: 8ನೇ ಘಟಕದ ಬೂದಿಸಾಗಣೆಯ ಒಟ್ಟು 4 ಮಾರ್ಗಗಳಲ್ಲಿ ಎರಡು ಮಾರ್ಗಗಳು ಸಂಪೂರ್ಣ ಹಾನಿಗೀಡಾಗಿರುದ್ದು, ಇನ್ನೆರಡು ಮಾರ್ಗಗಳ ಬಳಿಯೇ ಬಿದ್ದಿರುವ ಅವಶೇಷಗಳ ತೆರವು ಕೈಗೊಂಡಲ್ಲಿ ಅವುಗಳನ್ನು ಬಳಕೆ ಮಾಡಬಹುದಾಗಿದೆ ಎಂದು ತಂಡ ಸಭೆಯ ವೇಳೆ ತಿಳಿಸಿರುವುದು ಕೆಪಿಸಿ ಅಧಿಕಾರಿಗಳಲ್ಲಿ ವಿಶ್ವಾಸ ಹೆಚ್ಚಿಸಿದೆ.
ಹೀಗಾಗಿ ಮುಂದಿನ 15 ದಿನಗಳಲ್ಲಿ 8ನೇ ಘಟಕವನ್ನು ಪುನಾ ವಿದ್ಯುತ್ ಉತ್ಪಾದನೆಗೆ ತೊಡಗಿಸುವ ವಿಶ್ವಾಸ ವ್ಯಕ್ತಪಡಿಸಿರುವ ಕೆಪಿಸಿ ತಾಂತ್ರಿಕ ವಿಭಾಗವು ರಾಜ್ಯದ ವಿದ್ಯುತ್ ಸಮಸ್ಯೆ ನೀಗಿಸುವ ಪ್ರಯತ್ನಕ್ಕೆ ಮುಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com