ರಾಯಚೂರು: ಲಿಂಗಸ್ಗೂರು ತಾಲೂಕಿನ ಈಚನಾಳ ಬಳಿ ಟಾಟಾ ಎಸಿ ಪಲ್ಟಿಯಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ. ಮೃತನನ್ನು ಹನುಮಂತ(40) ಎಂದು ಗುರುತಿಸಲಾಗಿದೆ. ಟಾಟಾ ಎಸಿ ವಾಹನದಲ್ಲಿ ಲಿಂಗಸ್ಗೂರಿಗೆ ತೆರಳುತ್ತಿದ್ದ ವೇಳೆ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ವಾಹನ ಪಲ್ಟಿಯಾಗಿದ್ದು, ಅದರಲ್ಲಿ ತೀವ್ರ ಗಾಯಗೊಂಡ ಈತ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಲಿಂಗಸ್ಗೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಜೂಜು: 7 ಜನರ ಬಂಧನ
ರಾಯಚೂರು: ನಗರದ ಹೈದರಾಬಾದ್ ರಸ್ತೆಯಲ್ಲಿ ಇಸ್ಪೀಟ್ ಆಡುತ್ತಿದ್ದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಂದಾನಪ್ಪ ಮತ್ತಿತರೆ 6 ಜನರೆಂದು ಗುರುತಿಸಲಾಗಿದೆ. ಇವರು ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಪೆರೋಲ್ ಮೇಲೆ ಅಪರಾಧಿ ಪರಾರಿ
ರಾಯಚೂರು: ಪೆರೋಲ್ ಮೇಲೆ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಅಪರಾಧಿಯೊಬ್ಬ ಕಾರಾಗೃಹಕ್ಕೆ ವಾಪಸಾಗದೇ ಕಾಣೆಯಾಗಿದರುವ ಘಟನೆ ಸಿಂಧನೂರು ತಾಲೂಕಿನ ಹೊಸಳ್ಳಿ ಕ್ಯಾಂಪಿನಲ್ಲಿ ನಡೆದಿದೆ. ಗ್ರಾಮದ ಈಶಪ್ಪ ಎಂಬಾತ ಬಳ್ಳಾರಿ ಕಾರಾಗೃಹದಲ್ಲಿ ಸಜೆ ಅನುಭವಿಸುತ್ತಿದ್ದು, ಹೊಸಳ್ಳಿ ಕ್ಯಾಂಪಿನಲ್ಲಿರುವ ತನ್ನ ಅಣ್ಣ ಶರಣಪ್ಪನ ಅನಾರೋಗ್ಯದ ನಿಮಿತ್ತ 2012ರ ಸೆ.17ರಂದು 30ದಿನಗಳ ಅವಧಿಗೆ ಸಾಮಾನ್ಯ ಪೆರೋಲ್ ರಜೆಯ ಮೇಲೆ ಕಾರಾಗೃಹದಿಂದ ಹೊಸಳ್ಳಿ ಕ್ಯಾಂಪಿಗೆ ಬಂದಿದ್ದು, ಪೆರೋಲ್ ಅವಧಿ ತೀರಿದರೂ ಕಾರಾಗೃಹಕ್ಕೆ ಮರಳದೇ ತಪ್ಪಿಸಿಕೊಂಡಿದ್ದಾನೆಂದು ಬಳ್ಳಾರಿ ಕಾರಾಗೃಹದ ಅಧೀಕ್ಷಕರು ಪೊಲೀಸರಿಗೆ ದೂರಲಾಗಿದೆ.