ಸಿಂಧನೂರು: ತಾಲೂಕಿನ ಕೆಳ ಭಾಗಕ್ಕೆ ಸಮರ್ಪಕ ನೀರು ಹರಿಸಬೇಕೆಂದು ಒತ್ತಾಯಿಸಿ ಕೆಳ ಭಾಗದ ರೈತರು ಮಂಗಳವಾರ ರಾತ್ರಿ ಪಿಡಬ್ಲ್ಯೂಡಿ ಕ್ಯಾಂಪ್ನ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ರಾಯಚೂರು ನಗರಕ್ಕೆ ನೀರು ಹರಿಸುವ ಸದುದ್ದೇಶದಿಂದ ತುಂಗಭದ್ರಾ ಎಡದಂಡೆ ನಾಲೆಯ ನೀರು ಹರಿವುದನ್ನು ನಾಲ್ಕು ದಿನ ತಡೆಯುವ ಬಗ್ಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು, ಇದರಿಂದ ಕೆಳ ಭಾಗಕ್ಕೆ ತೀವ್ರ ಅನ್ಯಾಯವಾಗಲಿದೆ. ಇನ್ನು ಕೆಳ ಭಾಗಕ್ಕೆ ಹನಿ ನೀರು ಹರಿದಿಲ್ಲ. ಈಗ ಒಮ್ಮಿಂದಲೇ ಸಿಂಧನೂರು ವಿಭಾಗದ 0 ದಿಂದ 55 ನೇ ಉಪ ಕಾಲುವೆಗಳನ್ನು ಬಂದ್ ಮಾಡಿ ರಾಯಚೂರಿಗೆ ನೀರು ಹರಿಸುವ ತೀರ್ಮಾನ ಸರಿಯಲ್ಲ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗಲಿದೆ ಎಂದು ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ ಹೇಳಿದರು. ಯಾವುದೇ ಕಾರಣಕ್ಕೆ ನೀರು ತಡೆ ಹಿಡಿಯುವ ಬಗ್ಗೆ ನಿರ್ಧರಿಸಬಾರದೆಂದು ರೈತರು ಒತ್ತಾಯಿಸಿದರು. ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ ಅಧಿಕಾರಿಗಳೊಂದಿಗೆ ಚರ್ಚಿಸಿ ಸಿಂಧನೂರು ಉಪಕಾಲುವೆಗಳಿಗೆ ನೀರು ಸ್ಥಗಿತಗೊಳಿಸಬಾರದೆಂದು ಮನವಿ ಮಾಡಿದರು. ವೆಂಕೋಬ ಭಾವಿಕಟ್ಟಿ, ರಾಮರಾವ್ ಪಾಲ್ಗೊಂಡಿದ್ದರು.