ಸಿಂಧನೂರು: ತಾಲೂಕಿನ ಮೂರು ಮೈಲ್ ಕ್ಯಾಂಪಿನಲ್ಲಿ ಶಾರದಾ ಮಹಿಳಾ ಮಹಾವಿದ್ಯಾಲಯದಿಂದ ಹಮ್ಮಿಕೊಂಡಿರುವ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದ್ದು ಹೀಗೆ.
ಹೈದರಾಬಾದ್ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಮಹಿಳೆಯರು ಶೈಕ್ಷಣಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದಿದ್ದಾರೆ. ಕೇವಲ ಬಿಎ, ಬಿಕಾಂ, ಬಿಎಸ್ಸಿ ಪಾಸಾದರೇ ಸಾಕಾಗುವುದಿಲ್ಲ. ಉನ್ನತ ಅಧ್ಯಯನಕ್ಕೆ ಹೋಗಬೇಕಾಗಿದೆ. ವೃತ್ತಿಪರ ಕೋರ್ಸ್ಗಳನ್ನು ಓದುವ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳುವ ಜವಾಬ್ದಾರಿಯನ್ನು ಯಾರು ಮರೆಯಬಾರದು. ಸ್ಪರ್ಧೆಯಿಂದ ಅಭ್ಯಾಸ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಜೆಡಿಎಸ್ ತಾಲೂಕಾಧ್ಯಕ್ಷ ಎಂ. ಲಿಂಗಪ್ಪ ಮಾತನಾಡಿ, ಎನ್ಎಸ್ಎಸ್ ಶಿಬಿರದಲ್ಲಿ ಭಾಗವಹಿಸುವುದರಿಂದ ನಾಯಕತ್ವ, ಸೇವಾ ಮನೋಭಾವ ಮತ್ತು ಸಾಮಾನ್ಯ ಜ್ಞಾನ ಬೆಳೆಯುತ್ತದೆ. ವಿದ್ಯಾರ್ಥಿ ದೆಸೆಯಿಂದ ಸೇವೆಯನ್ನು ರೂಢಿಸಿಕೊಳ್ಳಲು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ರಾಯಚೂರು ಸುದ್ದಿಬಿಂಬ ದಿನಪತ್ರಿಕೆಯ ಸಂಪಾದಕ ಡಿ.ಎಚ್. ಕಂಬಳಿ ಮಾತನಾಡಿ, ಎನ್ಎಸ್ಎಸ್ ಮಹತ್ವವನ್ನು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎನ್.ಶಿವನಾಗಪ್ಪ, ಮೂರು ಮೈಲ್ ಕ್ಯಾಂಪಿನಲ್ಲಿ ಅತ್ಯಂತ ಬಡ ಜನರು ವಾಸಿಸುತ್ತಿದ್ದು ಅವರಿಗೆ ಮೂಲ ಸೌಲಭ್ಯ ಸಿಕ್ಕಿಲ್ಲ. ವಿದ್ಯಾರ್ಥಿನಿಯರು ಅವರ ಕಷ್ಟಗಳಿಗೆ ಸ್ಪಂದಿಸಿ ಸಮಸ್ಯೆಗಳನ್ನು ಪಟ್ಟಿಮಾಡಿಕೊಂಡು ನಗರಸಭೆಗೆ ಸಲ್ಲಿಸಬೇಕೆಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯರು ಸರಳ ಜೀವನ ವ್ಯಕ್ತಿತ್ವವನ್ನು ವಿಕಾಸಗೊಳಿಸುತ್ತದೆ. ಪ್ರತಿಯೊಬ್ಬರು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವ ಜವಾಬ್ದಾರಿಯನ್ನು ಮರೆಯಬಾರದು ಎಂದು ಹೇಳಿದರು. ಮದರ್ ಥೇರೆಸಾ, ಸಾಲು ಮರದ ತಿಮ್ಮಕ್ಕ ಮತ್ತಿತರರ ಸೇವಾ ನಿದರ್ಶನಗಳನ್ನು ವಿವರಿಸಿದರು.
ಎನ್ಎಸ್ಎಸ್ ಅಧಿಕಾರಿ ರಾಜಣ್ಣ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಬಸವರಾಜ ಬಾದರ್ಲಿ, ಸಂಗಯ್ಯಸ್ವಾಮಿ ಸರಗಣಾಧೀಶ್ವರ ಮಠ, ಮಲ್ಲಿನಾಥ ಶಾಸ್ತ್ರಿ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಮಂಜುನಾಥ ಸ್ವಾಗತಿಸಿದರು. ಶರಣಮ್ಮ ಕಾರ್ಯಕ್ರಮ ನಿರೂಪಿಸಿದರು.