ಸಿಂಧನೂರು: ಬದುಕಿನಲ್ಲಿ ಇನ್ನೊಬ್ಬರ ಆಸರೆ ಬಯಸದೇ ಸ್ವಾವಲಂಬಿಗಳಾಗಿ ಬದುಕುವ ಪ್ರಯತ್ನಕ್ಕೆ ಎಲ್ಲರೂ ಮುಂದಾಗಬೇಕೆಂದು ರಾಜ್ಯದ ಖಾದಿ ಮತ್ತು ಗ್ರಾಮೋದ್ಯೋಗ ನಿಗಮ ಮಂಡಳಿ ಅಧ್ಯಕ್ಷ ಉಮೇಶ ಬಂಟವಾಡಕರ್ ಅಭಿಪ್ರಾಯಪಟ್ಟರು. ತಾಲೂಕ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಸಂಘದಿಂದ ಕೋಟೆ ವೀರಣ್ಣ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ತಾವು ಹೊಟೇಲ್ ಉದ್ಯಮಿಯಾಗಿದ್ದು, ತಮ್ಮದೇ ಸ್ವಂತ ಉದ್ಯೋಗವಿದೆ. ಸಮಾಜಮುಖಿ ಕೆಲಸ ಮಾಡಬೇಕೆನ್ನುವ ಅಭಿಲಾಷೆಯಿಂದ ಬಿಜೆಪಿ ಕಾರ್ಯಕರ್ತನಾಗಿ ದುಡಿದೆ. ಖಾದಿ ಮತ್ತು ಗ್ರಾಮೋದ್ಯೋಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹೊಂದಲು ಸಾಧ್ಯವಾಯಿತು ಎಂದರು. ನಗರದ ಸತ್ಕಾರ ಹೊಟೇಲ್ ಮಾಲೀಕ ವೆಂಕಟೇಶ ಪ್ರಭು, ಬೃಂದಾವನ ಹೊಟೇಲ್ ಮಾಲೀಕ ಭಾಸ್ಕರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಕರಾವಳಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಧ್ವರಾಜ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರವಿ ಯು.ಪ್ರಭು ಪಾಲ್ಗೊಂಡಿದ್ದರು.