ಗುಣಾತ್ಮಕ ಶಿಕ್ಷಣ ಅಗತ್ಯ

Updated on: 

ರಾಯಚೂರು: ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡಿಕೆಯತ್ತ ಹೆಚ್ಚಿನ ಗಮನಹರಿಸಬೇಕು. ನಿರಂತರ ಅಧ್ಯಯನ ಮತ್ತು ಬೋಧನಾ ಕೌಶಲ್ಯದಲ್ಲಿ ಮಾರ್ಪಾಟು ಮಾಡಿಕೊಳ್ಳುವ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಕಾರಣರಾಗುವಂತೆ ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಸಲಹೆ ನೀಡಿದರು.
ನಗರದ ರಂಗಮಂದಿರದಲ್ಲಿ ಸೋಮವಾರ ತಾಲೂಕು ಮಟ್ಟದ ಪ್ರೌಢಶಾಲಾ ಸಹಶಿಕ್ಷಕರ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಶಿಕ್ಷಕರ ವೃತ್ತಿ ಪವಿತ್ರವಾದುದು. ಶಿಕ್ಷಕರು ಮಾಹಿತಿಯ ಕಣಜವಾಗಿ ಉಳಿಯದೇ ಮಕ್ಕಳಿಗೆ ಜ್ಞಾನಾರ್ಜನೆ ಮಾಡುವತ್ತ ಹೆಚ್ಚಿನ ಗಮನಹರಿಸಬೇಕೆಂದು ಕರೆ ನೀಡಿದರು.
ಬೋಧನೆಯಲ್ಲೂ ಬದಲಾವಣೆ ಕಂಡುಕೊಳ್ಳಿ: ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಿ ಅವರಲ್ಲಿ ಕೌಶಲ್ಯಗಳನ್ನು ತುಂಬುವ ಕಾರ್ಯ ಶಿಕ್ಷಕರು ಮಾಡಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ವಿಷಯದಲ್ಲಿ ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಶಿಕ್ಷಕರು ಬದಲಾವಣೆ ತಂದುಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಡಿಡಿಪಿಐ ಪರಮೇಶ್ವರ್ ಮಾತನಾಡಿ, ಶಿಕ್ಷಕರು ಪ್ರತಿ ಸರಣಿ ಪರೀಕ್ಷೆಯ ವೇಳೆ ಪ್ರತಿಯೊಂದೂ ಮಗುವಿನ ಉತ್ತರ ಪತ್ರಿಕೆಯನ್ನು ಕೂಲಂಕಷವಾಗಿ ಗಮನಿಸಿ ಮೌಲ್ಯಮಾಪನ ಮಾಡಬೇಕು. ನಂತರದಲ್ಲಿ ಅಂಥ ಮಗು ಪ್ರಶ್ನೆಗಳನ್ನು ಉತ್ತರಿಸುವಲ್ಲಿ ಎಲ್ಲಿ ಎಡವಿದೆ. ಅದಕ್ಕೆ ಪರಿಹಾರಗಳೇನು ಎಂಬುದನ್ನು ಗುರುತಿಸಿ ಮಕ್ಕಳಿಗೆ ಅದೇ ರೀತಿಯಲ್ಲಿ ಮಾರ್ಗದರ್ಶನ ಮಾಡುವುದು ಅವಶ್ಯಕ ಎಂದರು.
ಪರೀಕ್ಷೆ ಎದುರಿಸಲು ಸಜ್ಜುಗೊಳಿಸಿ: ಪರೀಕ್ಷೆಯ ಫಲಿತಾಂಶದ ಹೆಚ್ಚಳ ಎಲ್ಲ ಶಿಕ್ಷಕರ ಗುರಿಯಾಗಬೇಕಿದೆ. ಫಲಿತಾಂಶದಲ್ಲಿ ಹೆಚ್ಚಳ ಮಾಡಲು ಅಗತ್ಯ ಮಾರ್ಪಾಟುಗಳನ್ನು ಶಿಕ್ಷಕರು ಬೋಧನೆಯಲ್ಲಿ ಮಾಡಿಕೊಳ್ಳಬೇಕು. ಹಾಗೆಯೇ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸಜ್ಜುಗೊಳಿಸಬೇಕೆಂದು ಸಲಹೆ ನೀಡಿದರು.
ಕಳೆದ ಕೆಲ ವರ್ಷಗಳಿಂದ ಜಿಲ್ಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಷ್ಟೇನೂ ಉತ್ತಮ ಸಾಧನೆ ತೋರಿಲ್ಲ. ಮುಂಬರುವ ಪರೀಕ್ಷೆಯಲ್ಲಾದರೂ ಉತ್ತಮ ಫಲಿತಾಂಶದ ಸಾಧನೆಗೆ ಎಲ್ಲರೂ ಪಣ ತೊಡಬೇಕಿದೆ. ಈ ನಿಟ್ಟಿನಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ, ಸಾರ್ವಜನಿಕರು ಸಹಕಾರ ನೀಡಬೇಕಿದೆ ಎಂದು ಹೇಳಿದರು.
ಶಿಕ್ಷಕರ ಸಮಸ್ಯೆಗೆ ಶೀಘ್ರ ಪರಿಹಾರ: ಶಿಕ್ಷಕರು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ತಾವು ಸದಾ ಸಿದ್ಧ ಎಂದ ಅವರು, ಶಿಕ್ಷಕರು ಸೇವಾ ಪುಸ್ತಕವನ್ನು ನಿಯಮಿತವಾಗಿ ತಪಾಸಣೆ ಮಾಡಿಕೊಳ್ಳಬೇಕು. ಅದರಿಂದ ಭವಿಷ್ಯದಲ್ಲಿ ಸಾಕಷ್ಟು ಅನುಕೂಲಕತೆಗಳಾಗುತ್ತವೆ ಎಂದರು.
ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ್ ಮಾತನಾಡಿ, ಶಿಕ್ಷಕರಿಂದು ಶೈಕ್ಷಣಿಕ ಕ್ಷೇತ್ರದ ಹತ್ತಾರು ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ. ಅದಕ್ಕಾಗಿ ಪೂರ್ವ ಸಿದ್ಧತೆಯೂ ಅಗತ್ಯ. ಹೀಗಾಗಿ ಶಿಕ್ಷಕರು ಫಲಿತಾಂಶ ಕೇಂದ್ರಿತ ಬೋಧನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಸಲಹೆ ನೀಡಿದರು.
ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿಕೆ ಎಲ್ಲರ ಗುರಿಯಾಗಬೇಕು. ಶಿಕ್ಷಕರು ಬಲವಂತವಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆಂಬ ಆರೋಪಗಳಿದ್ದು ಅಂಥ ಆರೋಪಗಳಿಂದ ಮುಕ್ತರಾಗಲು ಶಿಕ್ಷಕರು ಕಾರ್ಯನಿರ್ವಹಣೆಯಲ್ಲಿ ಮಾರ್ಪಾಟು ಮಾಡಿಕೊಳ್ಳುವುದು ಅವಶ್ಯಕ ಎಂದರು.
ಆಧುನಿಕ ಬೋಧನಾ ಕೌಶಲ್ಯ ಅಳವಡಿಸಿಕೊಳ್ಳಿ: ಅನಾದಿ ಕಾಲದಿಂದಲೂ ದೇಶದ ಸಂಸ್ಕೃತಿ, ಶಿಕ್ಷಣ ಪದ್ಧತಿ ಉತ್ತಮವಾಗಿದೆ. ಗುರುಕುಲ ಮಾದರಿಯಿಂದಲೇ ದೇಶದಲ್ಲಿ ಶಿಕ್ಷಣ ನೀಡಿಕೆ ಆರಂಭವಾಗಿತ್ತು. ಸದ್ಯ ಹತ್ತಾರು ರೀತಿಯ ಆಧುನಿಕ ತಂತ್ರಜ್ಞಾನಗಳು ಜಾರಿಗೆ ಬಂದಿವೆ. ಶಿಕ್ಷಕರೂ ಆಧುನಿಕ ಬೋಧನಾ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸಂಘದ ಕಾನೂನು ಸಲಹೆಗಾರ ಶರಣಪ್ಪ ಮಟ್ಟೂರು, ಮಲ್ಲನಗೌಡ ಗೌಡರ್, ಬಿಇಒ ಮಲ್ಲಿಕಾರ್ಜುನ, ಮಹೆಬೂಬ್ ಪಾಷಾ ಮೂಲಿಮನಿ, ಹೀರಾಬಾಯಿ, ರಾಜಶೇಖರ್ ದಿನ್ನಿ, ಬಾಬುರಾವ್ ಶೇಗುಣಸಿ, ಬಾಬು ಭಂಡಾರಿಗಲ್,ಸೈಯದ್ ಸಿರಾಜ್ ಹುಸೇನ್ ಸೇರಿದಂತೆ ಅನೇಕರಿದ್ದರು.
ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಪ್ರೌಢಶಾಲಾ ಸಹ ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com