ಜವಳಗೇರಾ ಬಳಿ ಅಪಘಾತ: ಮೂವರ ಸಾವು

Updated on: 

ಸಿಂಧನೂರು: ತಾಲೂಕಿನ ಜವಳಗೇರಾ ಗ್ರಾಮದ ಬಳಿ ಲಾರಿ ಹಾಗೂ ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ತೀವ್ರ ಗಾಯಗೊಂಡು ರಾಯಚೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಅಸುನೀಗಿದ ದಾರುಣ ಘಟನೆ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ. ರಾಯಚೂರಿನಿಂದ ಸಿಂಧನೂರಿಗೆ ಬರುತ್ತಿದ್ದ ಲಾರಿ ಎದುರಿಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ವಿಜಯಕುಮಾರ ಹಾಗೂ ಮಲ್ಲಾರೆಡ್ಡಿ ಎಂಬವರು ಸ್ಥಳದಲ್ಲೇ ಮೃತಪಟ್ಟರು. ತೀವ್ರವಾಗಿ ಗಾಯಗೊಂಡಿದ್ದ ಮಾಳಪ್ಪ ರಾಯಚೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸರೆ ಹಕ್ಕುಪತ್ರ ವಿತರಣೆಗೆ ಆಗ್ರಹ
ರಾಯಚೂರು: ತಾಲೂಕಿನ ಗೋಡಿಹಾಳ ಗ್ರಾಮದಲ್ಲಿ ಪುನಾವಸತಿ ಮನೆಗಳಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಯವರಿಗೆ ಅವರಿರುವ ಮನೆಗಳ ಹಕ್ಕುಪತ್ರಗಳನ್ನು ವಿತರಿಸಬೇಕು. ಹೆಚ್ಚುವರಿ ಮನೆಗಳನ್ನು ಗುಳೆ ಹೋದವರಿಗೆ ವಿತರಿಸಬೇಕೆಂದು ಭಾರತೀಯ ದಲಿತ ಪ್ಯಾಂಥರ್ಸ್ ಆಗ್ರಹಿಸಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿ, 2009ರಲ್ಲಿ ಪ್ರವಾಹ ನಂತರ ಗ್ರಾಮದಲ್ಲಿ ಕೈಗೊಂಡ ಆಸರೆ ಮನೆಗಳನ್ನು ಇದುವರೆಗೆ ಹಸ್ತಾಂತರಿಸಿಲ್ಲ. ಆದರೆ ದಲಿತರ 33 ಕುಟುಂಬಗಳು ಮನೆಗಳಲ್ಲಿ ವಾಸವಾಗಿದ್ದು, ಗ್ರಾಮದ ಕೆಲ ಪ್ರಭಾವಿಗಳು ದಲಿತರನ್ನು ಆಸರೆ ಮನೆಗಳಿಂದ ಹೊರಹಾಕುವ ಪ್ರಯತ್ನ ಮಾಡಿದ್ದಾರೆಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಕೂಡಲೇ ದಲಿತ ಕುಟುಂಬಗಳಿಗೆ ರಕ್ಷಣೆ ಕೊಡಬೇಕು. ಹಾಗೆಯೇ ಅವರು ವಾಸವಾಗಿರುವ ಆಸರೆ ಮನೆಗಳ ಹಕ್ಕುಪತ್ರಗಳ ವಿತರಣೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಬರ ಹಿನ್ನೆಲೆಯಲ್ಲಿ ಕೆಲ ಕುಟುಂಬಗಳು ಗುಳೆ ಹೋಗಿದ್ದು, ಅಂಥವರಿಗೆ ಹೆಚ್ಚುವರಿಯಾಗಿ ನಿರ್ಮಿಸಿದ 13 ಮನೆಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘಟನೆ ಪ್ರಮುಖರಾದ ರವೀಂದ್ರನಾಥ ಪಟ್ಟಿ, ಜಗನ್ನಾಥ ಸುಂಕಾರಿ, ತಿಮ್ಮಾರೆಡ್ಡಿ, ಗುರುನಾಥ ಸುಂಕಾರಿ, ಅಂಜಿನಯ್ಯ ಅನೇಕರಿದ್ದರು.
ಸೇವೆಯಿಂದ ವಜಾ
ಗುಲ್ಬರ್ಗ: ಸುರಪುರ ತಾಲೂಕಿನ ಮಾರಲಭಾವಿ ಗ್ರಾಮಲೆಕ್ಕಿಗ ಗುರುಲಿಂಗಯ್ಯ ಅವರನ್ನು ಸರ್ಕಾರಿ ಕೆಲಸದಲ್ಲಿ ಅನಧಿಕೃತವಾಗಿ ಧೀರ್ಘಕಾಲದವರೆಗೆ ಗೈರು ಹಾಜರಾದ ಪ್ರಯುಕ್ತ ಸರ್ಕಾರಿ ಸೇವೆಯಿಂದ ವಜಾ ಮಾಡಿ ಗುಲ್ಬರ್ಗ ಜಿಲ್ಲಾಧಿಕಾರಿ ಹಾಗೂ ಶಿಸ್ತುಪ್ರಾಧಿಕಾರಿ ಆದೇಶ ಹೊರಡಿಸಿದ್ದಾರೆ. ಸದರಿಯವರನ್ನು ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1975ರ ಅನ್ವಯ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com