ರಾಯಚೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರಸಕ್ತ ಬಜೆಟ್ನಲ್ಲಿ ರು. 2 ಸಾವಿರ ಕೋಟಿ ಒದಗಿಸುವಂತೆ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ನಿಗಮದ ಅಧ್ಯಕ್ಷ ಅಶೋಕ ಗಸ್ತಿ ಹೇಳಿದರು.
ಅವರು ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ರಾಜ್ಯ ಸರ್ಕಾರ ರು. 1 ಸಾವಿರ ಕೋಟಿ ನೀಡಿತ್ತು. ಪ್ರಸಕ್ತ ವರ್ಷ ರು. 2 ಸಾವಿರ ಕೋಟಿ ಒದಗಿಸಲು ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹತ್ತಾರು ಯೋಜನೆಗಳ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಸರ್ಕಾರಕ್ಕೆ ಮನವಿ: ಕಳೆದ ಹಣಕಾಸು ವರ್ಷದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ರು. 274 ಕೋಟಿ ಪೈಕಿ ರು. 190 ಕೋಟಿ ದೊರೆತಿತ್ತು. ಆ ಮೊತ್ತವನ್ನು ವಿವಿಧ ಯೋಜನೆಗಳಿಗೆ ವೆಚ್ಚ ಮಾಡಲಾಗಿದೆ. ನಿಗಮಕ್ಕೆ ಪ್ರಸಕ್ತ ಬಜೆಟ್ನಲ್ಲಿ ರು. 500 ಕೋಟಿ ಒದಗಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ನಿಗಮದಲ್ಲಿ 68 ಪ್ರಮುಖ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ. ಇನ್ನೂ 250 ಹುದ್ದೆಗಳ ಭರ್ತಿಗೆ ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುತ್ತದೆ. ರಾಜ್ಯದ ಜನಸಂಖ್ಯೆಯ ಶೇ.52ರಷ್ಟಿರುವ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮ ಯೋಜಿಸಲಾಗಿದೆ ಎಂದರು.
ವೃತ್ತಿ ಸಾಲ: ವೃತ್ತಿಯ ಅಭಿವೃದ್ಧಿ, ಆಧುನಿಕ ಉಪಕರಣಗಳ ಖರೀದಿಗೆ, ದುಡಿಮೆ ಬಂಡವಾಳಕ್ಕೆ ಗರಿಷ್ಠ ರು. 35ಸಾವಿರ ಸಾಲ ನೀಡುವ ಯೋಚನೆಯಿದೆ. ಅದರಲ್ಲಿ ರು. 5 ಸಾವಿರ ಸಬ್ಸಿಡಿ ನೀಡಲಾಗುತ್ತದೆ. ಶೇ. 4ರ ಬಡ್ಡಿ ದರದಲ್ಲಿ ಸಾಲ ಮರುಪಾವತಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಕುಂಬಾರಿಕೆ ಯೋಜನೆ ಅಡಿ ಕುಂಬಾರರಿಗೆ ರು. 35 ಸಾವಿರ ಸಾಲ ನೀಡಲಾಗುತ್ತದೆ. ಶೇ. 4ರ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಅಲೆಮಾರಿ ಜನಾಂಗದವರಿಗೆ, ಸವಿತಾ ಸಮಾಜದವರಿಗೆ ಸೇರಿದಂತೆ ಹಿಂದುಳಿದ ವರ್ಗಗಳವರಿಗೆ ಸಬ್ಸಿಡಿಯಲ್ಲಿ ಸಾಲ ನೀಡಿಕೆ ಯೋಜನೆಗಳನ್ನು ಜಾರಿಗೆ ತರಲು ಯೋಜಿಸಲಾಗಿದೆ ಎಂದರು.
ಹೊಸದಾಗಿ ವಕೀಲಿ ವೃತ್ತಿ ಆರಂಭಿಸುವ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ಆರ್ಥಿಕ ಸಹಾಯ ನೀಡಲಾಗುತ್ತದೆ. ಅದೇ ರೀತಿ ಕಾನೂನು ಪದವಿ ಅಧ್ಯಯನಕ್ಕೂ ನೆರವು ಕಲ್ಪಿಸುವ ಉದ್ದೇಶವಿದೆ. ಹಾಗೆಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿಕೆ, ಅಧ್ಯಯನಕ್ಕೆ ಗ್ರಂಥಾಲಯ ಸ್ಥಾಪನೆಯ ಯೋಚನೆಯಿದೆ ಎಂದು ತಿಳಿಸಿದರು.
ಆರ್ಥಿಕ ನೆರವು: ಕುರಿ ಸಾಕಾಣಿಕೆಗೆ ಕುರುಬ ಸಮಾಜದವರಿಗೆ ನಿಗಮದಿಂದ ಸದ್ಯ ರು. 35 ಸಾವಿರ ಸಹಾಯ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರು. 1 ಲಕ್ಷ ನೆರವು ನೀಡುವ ಉದ್ದೇಶವಿದ್ದು, ಕುರಿಗಾರರಿಗೆ ಕುರಿಸಾಕಾಣಿಕೆಗೆ ಶೆಡ್ ನಿರ್ಮಿಸಲು ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಹೇಳಿದರು.
ಮಡಿವಾಳ ಸಮಾಜದವರಿಗೆ ಮೊಪೆಡ್ ನೀಡುವ ಯೋಜನೆಯಿದೆ. ಮೀನುಗಾರಿಕೆಯಲ್ಲಿ ತೊಡಗಿರುವವರಿಗೂ ಸಹಾಯ ಧನ ನೀಡಲಾಗುತ್ತದೆ. ಹೀಗೆ ಎಲ್ಲ ಯೋಜನೆಗಳಿಗೆ ರಾಜ್ಯದ ಪ್ರತಿ ವಿಧಾನಸಭೆ ಕ್ಷೇತ್ರದಿಂದ 18ರಿಂದ 20 ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಬಾಕಿ ಮನ್ನಾ: ನಿಗಮ ಸ್ಥಾಪನೆಯಾದಾಗಿನಿಂದ ಇದುವರೆಗೆ ಒಟ್ಟು ರು. 131 ಕೋಟಿ ಸಾಲ ಬಾಕಿಯಿದ್ದು, ಅದರಲ್ಲಿ ರು. 85 ಕೋಟಿ ಮನ್ನಾಕ್ಕೆ ಸರ್ಕಾರಕ್ಕೆ ಪ್ರಸಾವನೆ ಸಲ್ಲಿಸಿದ್ದು, ಬಾಕಿ ರು. 50ಕೋಟಿ ಪಾವತಿಗೆ ಸಂಬಂಧಿಸಿದವರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಗ್ರಾಮೀಣ ಬಡ ಕ್ಷೌರಿಕರಿಗೆ ಸೈಕಲ್ ವಿತರಣೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದ ಅವರು, ಗಂಗಾ ಕಲ್ಯಾಣ ಯೋಜನೆಯಡಿ 8 ಸಾವಿರ ವೈಯಕ್ತಿಕ ಕೊಳವೆ ಬಾವಿಗಳಿಗೆ ಇದುವರೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ವಿಳಂಬವಾಗಿದೆ. ಮತ್ತೆ ಕೆಲವರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಅಂಥ ಸಂಪರ್ಕಗಳನ್ನು ಸಕ್ರಮಗೊಳಿಸುವುದು ನಿಗಮದ ಉದ್ದೇಶವಾಗಿದೆ ಎಂದರು. ಈ ಸಂದರ್ಭ ಮಾಜಿ ಶಾಸಕ ಪಾಪಾರೆಡ್ಡಿ, ಅಮರೇಶ್ ಹೊಸಮನಿ, ದೊಡ್ಡಮಲ್ಲೇಶ, ಟಿ. ಮಲ್ಲೇಶ, ಟಿ. ಶ್ರೀನಿವಾಸ್, ರಮಾನಂದ ಯಾದವ್, ಬಂಡೇಶ್ ವಲ್ಕಂದಿನ್ನಿ, ಲಾಲಪ್ಪ ಮತ್ತಿತರರು ಇದ್ದರು.