ರಾಯಚೂರು: ಬೆಂಗಳೂರಿನ ಈಜಿಪುರ ಕೊಳಚೆ ಪ್ರದೇಶದ ನಿವಾಸಿಗಳನ್ನು ತೆರವುಗೊಳಿಸಿದ ಕ್ರಮವನ್ನು ಖಂಡಿಸಿ ಹಾಗೂ ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿ ನಗರದಲ್ಲಿ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಕಾರ್ಯಕರ್ತರು ಸೋಮವಾರ ಧರಣಿ ನಡೆಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ರಾಜ್ಯದ ಸಿಎಂಗೆ ಮನವಿ ಸಲ್ಲಿಸಿ, ಅಭಿವೃದ್ಧಿ ಹೆಸರಿನಲ್ಲಿ ಖಾಸಗಿ ಮಾಲ್ ನಿರ್ಮಾಣಕ್ಕೆ ಈಜಿಪುರ ಕೊಳಚೆ ಪ್ರದೇಶದ ನಿವಾಸಿಗಳನ್ನು ಬಿಬಿಎಂಪಿ ಒಕ್ಕಲೆಬ್ಬಿಸಿದೆ ಎಂದು ದೂರಿದರು.
ನಿರ್ಲಕ್ಷ್ಯ: ಬಿಬಿಎಂಪಿ ನ್ಯಾಯಾಲಯಕ್ಕೆ ದಿಕ್ಕು ತಪ್ಪಿಸುವ ಮೂಲಕ ಸ್ಲಂ ನಿವಾಸಿಗಳನ್ನು ತೆರವುಗೊಳಿಸಿದೆ. ಸ್ಲಂ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರಿದೆ. ಬಿಬಿಎಂಪಿ ಅಧಿಕಾರಿಗಳು ರಿಯಲ್ ಎಸ್ಟೇಟ್ ದಂಧೆ ಮಾಡುವವರಿಗೆ ನೆರವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಈ ಕೊಳಚೆ ಪ್ರದೇಶದಲ್ಲಿ 1512 ಕುಟುಂಬಗಳಿದ್ದು, ಅವುಗಳಲ್ಲಿ 300 ಕುಟುಂಬಗಳಿಗೆ ಪರಿಹಾರ ನೀಡಿ ತೆರವುಗೊಳಿಸಿರುವುದಾಗಿ ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಮೆವರಿಕ್ ಕಂಪನಿ, ಪೊಲೀಸ್, ಬಿಬಿಎಂಪಿ ಹಾಗೂ ಸ್ಥಳೀಯ ಗೂಂಡಾಗಳು ಅಮಾನವೀಯವಾಗಿ ನಿವಾಸಿಗಳನ್ನು ಹೊರಹಾಕಿದ್ದಾರೆಂದು ದೂರಿದರು.
ದೌರ್ಜನ್ಯ: ಸ್ಲಂ ನಿವಾಸಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗಿ ತೆರವುಗೊಳಿಸಿದ್ದಾರೆ. ದಲಿತ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮಕ್ಕಳ ವ್ಯಾಸಂಗಕ್ಕೆ ಇದರಿಂದ ತೊಂದರೆಯಾಗಿದೆ. ಮಾನವ ಹಕ್ಕುಗಳನ್ನು ಸ್ವತಃ ಸರ್ಕಾರವೇ ಉಲ್ಲಂಘಿಸಿದೆ ಎಂದು ಆರೋಪಿಸಿದರು.
ಬೆಂಗಳೂರಿನ ಈಜಿಪುರದ ಕೊಳಗೇರಿ ನಿವಾಸಿಗಳಿಗೆ ಶೈಕ್ಷಣಿಕ ವರ್ಷ ಕಳೆಯುವವರೆಗೆ ಈಗಿರುವ ಸ್ಥಳದಲ್ಲಿಯೇ ಪುನರ್ವಸತಿ ಕಲ್ಪಿಸಬೇಕು. ಬಿಬಿಎಂಪಿಯು ಮೆವರಿಕ್ ಕಂಪನಿಗೆ ನೀಡಿರುವ ಗುತ್ತಿಗೆ ಕರಾರು ಸರ್ಕಾರ ಮಧ್ಯಪ್ರವೇಶಿಸಿ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ವ್ಯಾಸಂಗಕ್ಕೆ ಆಗ್ರಹ: ಸ್ಲಂ ನಿವಾಸಿಗಳ ತೆರವುಗೊಂಡ ಪ್ರದೇಶದ ಕುಟುಂಬಗಳ ಮಕ್ಕಳಿಗೆ ವ್ಯಾಸಂಗಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ವಿದ್ಯಾರ್ಥಿಗಳಿಗೆ ಅಡಚಣೆ ನಿವಾರಣೆ ನಿಟ್ಟಿನಲ್ಲಿ ಪುನರ್ವಸತಿ ಕಲ್ಪಿಸಬೇಕು. ನ್ಯಾಯಾಲಯದ ಆದೇಶದ ಹೆಸರಿನಲ್ಲಿ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳವರ ಮೇಲೆ ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ದೌರ್ಜನ್ಯ ನಡೆಸುವ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದು, ಕೂಡಲೇ ಅಂಥವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಈಜಿಪುರದ ಸದ್ಯದ ಸ್ಥಳದಲ್ಲಿಯೇ ಪುನರ್ವಸತಿಗೆ ಅವಕಾಶ ಕಲ್ಪಿಸಬೇಕೆಂದು ಹೋರಾಟಗಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯ ಅಧ್ಯಕ್ಷ ತಾಯಣ್ಣ ಹೊಸೂರು, ಪ್ರಧಾನ ಕಾರ್ಯದರ್ಶಿ ಜನಾರ್ದನ ಹಳ್ಳಿಬೆಂಚಿ ಪ್ರಮುಖರಾದ ಭೀಮಣ್ಣ, ಹುಲಿಗೆಪ್ಪ, ವೆಂಕಟೇಶ್, ಚಂದ್ರು ಭಂಡಾರಿ, ನಾಗರಾಜ್, ಚಂದ್ರಶೇಖರ್, ಶ್ರೀಶೈಲರೆಡ್ಡಿ, ನಾಗರಾಜ್, ಜಂಬಣ್ಣ, ಸುರೇಶ್ ಗೌಡ ಇದ್ದರು.