ರಾಯಚೂರು: ಮಾನವಿ ತಾಲೂಕಿನ ಕೆ. ಗುಡದಿನ್ನಿ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೋಮವಾರ ಕರ್ನಾಟಕ ಜನಜಾಗೃತಿ ಸಮಿತಿ ಕಾರ್ಯಕರ್ತರು ಧರಣಿ ನಡೆಸಿದರು.
ನಗರದ ಜಿಪಂ ಎದುರು ಧರಣಿ ನಡೆಸಿದ ಕಾರ್ಯಕರ್ತರು ಜಿಪಂ ಸಿಇಒಗೆ ಮನವಿ ಸಲ್ಲಿಸಿ, ಮಾನವಿ ತಾಲೂಕಿನ ಕೆ. ಗುಡದಿನ್ನಿ ಗ್ರಾಪಂ ವ್ಯಾಪ್ತಿಯಲ್ಲಿ 2009ರಿಂದ 2012-13ನೇ ಸಾಲಿನವರೆಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಭಾರೀ ಅಕ್ರಮ ಎಸಗಿದ್ದು, ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಆರೋಪಿಸಿದರು.
ಉದ್ಯೋಗ ಖಾತ್ರಿ ಯೋಜನೆ ಅಡಿ ಎಲ್ಲ ಕಾಮಗಾರಿಗಳನ್ನು ಅಂದಾಜು ಪಟ್ಟಿಯಂತೆ ನಿರ್ವಹಿಸದೇ ಬೇಕಾಬಿಟ್ಟಿಯಾಗಿ ಕಾಮಗಾರಿ ನಿರ್ವಹಿಸಲಾಗಿದೆ. ಸ್ಥಳ ಪರಿಶೀಲಿಸದೇ ಕಿರಿಯ ಎಂಜಿನಿಯರ್ ಮತ್ತು ನೋಡಲ್ ಅಧಿಕಾರಿಗಳು ಹಾಗೂ ತಾಪಂ ಇಒ ಆಗಿದ್ದ ಬಸಯ್ಯ ಹಿರೇಮಠ ಅವರು ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆಂದು ದೂರಿದರು.
ಹುಸಿ ಭರವಸೆ: ಈ ವಿಷಯಕ್ಕೆ ಸಂಬಂಧಿಸಿ ಈಗಾಗಲೇ ಸಂಘಟನೆಯು ಅನೇಕ ಸಂದರ್ಭದಲ್ಲಿ ಹೋರಾಟ ನಡೆಸಿದಾಗ ಅಧಿಕಾರಿಗಳು ಕ್ರಮದ ಭರವಸೆ ನೀಡಿದ್ದು, ಆನಂತರದಲ್ಲಿ ಮರೆತಿದ್ದಾರೆ. ಅದೇ ರೀತಿ ಹೋರಾಟ ನಡೆಸಿದ್ದಕ್ಕೆ ಪ್ರತಿಯಾಗಿ ಸಂಘಟನೆಯ ಕಾರ್ಯಕರ್ತರಿಗೆ ಬೆದರಿಕೆಯೊಡ್ಡಿದ ಘಟನೆಗಳೂ ನಡೆದಿವೆ ಎಂದು ಆರೋಪಿಸಿದರು.
ಕಾರಣ ಕೂಡಲೇ ಕೆ.ಗುಡದಿನ್ನಿ ಗ್ರಾಪಂ ವ್ಯಾಪ್ತಿಯಲ್ಲಿ 2009ರಿಂದ ಇದುವರೆಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಕೈಗೊಂಡ ಕಾಮಗಾರಿಗಳ ಬಗ್ಗೆ ಉನ್ನತ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಬೇಕು. ಅದೇ ರೀತಿ ಈ ಅವಧಿಗೆ ವಿವಿಧ ವಸತಿ ಯೋಜನೆ ಅಡಿ ನಿರ್ಮಿಸಿದ ಮನೆಗಳನ್ನು ಸಂಪೂರ್ಣ ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿದರು.
ವಜಾ ಮಾಡಿ: ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಯೋಜನೆಗಳಡಿ ಅನುದಾನ ದುರ್ಬಳಕೆ ಮಾಡಿಕೊಂಡ ಗ್ರಾಪಂ ಅಧ್ಯಕ್ಷ, ಪಿಡಿಒ, ನೋಡಲ್ ಅಧಿಕಾರಿ, ತಾಪಂ ಇಒ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದರು.
ಅಪರಾಧ ಪ್ರಕರಣದ ಆರೋಪಿಯಾಗಿರುವ ಸದ್ಯದ ಗ್ರಾಪಂ ಅಧ್ಯಕ್ಷ ದ್ಯಾವಪ್ಪ ಅವರ ಸದಸ್ಯತ್ವ ರದ್ದುಗೊಳಿಸಬೇಕು. ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ಗ್ರಾಮದ ನ್ಯಾಯಬೆಲೆ ಅಂಗಡಿಯ ಮಾಲೀಕರ ಪರವಾನಗಿ ರದ್ದುಗೊಳಿಸಬೇಕೆಂದು ಆಗ್ರಹಿಸಿದರು. ಕೆ.ಗುಡದಿನ್ನಿ ಗ್ರಾಪಂ ಕರವಸೂಲಿಗಾರ ಅಕ್ರಮ ಆಸ್ತಿ ಗಳಿಸಿದ್ದು ಆ ಬಗ್ಗೆ ತನಿಖೆಗೊಳಪಡಿಸಬೇಕು. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಬಸವರಾಜ ನಕ್ಕುಂದಿ, ಅಬ್ರಹಾಂ ಜಾಗೀರಪನ್ನೂರು, ಯಲ್ಲಪ್ಪ ಬಾದರದಿನ್ನಿ, ಲಿಂಗಣ್ಣ ಮಾಡಗಿರಿ, ಮುತ್ತಣ್ಣ ಚಾಗಭಾವಿ, ಮುಕ್ಕಣ್ಣ ಬಲ್ಲಟಗಿ, ಹುಚ್ಚಪ್ಪ ಪೋತ್ನಾಳ್ ಇದ್ದರು.