ಕ.ಪ್ರ. ವಾರ್ತೆ, ಮುದಗಲ್, ನ.4
ಸ್ಥಳೀಯ ಪಶು ಚಿಕಿತ್ಸಾಲಯ ಸಿಬ್ಬಂದಿ ಕೊರತೆಯಿಂದ ಪಶು ಸಾಕಾಣಿಕೆದಾರರಿಗೆ ಇದ್ದೂ ಇಲ್ಲದಂತಾಗಿದೆ.
ಪಶುಗಳಿಗೆ ಚಿಕಿತ್ಸೆ ನೀಡಬೇಕಾದ ವೈದ್ಯರು ಇಲ್ಲ, ಹಿರಿಯ ಪಶು ವೈದ್ಯಕೀಯ ಸಂರಕ್ಷಕರು, ಡಿ ದರ್ಜೆ ನೌಕರರೂ ಇಲ್ಲದೆ ಇದ್ದುದರಿಂದ ಪಶು ಚಿಕಿತ್ಸಾಲಯ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ.
ಹಳೆಯ ಕಟ್ಟಡ, ಕುಡಿಯುವ ನೀರಿಲ್ಲ, ವಿದ್ಯುತ್, ಮಳೆ ಬಂದರೆ ಕಟ್ಟಡವೆಲ್ಲ ಸೋರುತ್ತಿದೆ. ಸಿಬ್ಬಂದಿಯಿಲ್ಲದೆ ಬಿಕೋ ಎನ್ನುತ್ತಿದೆ. ಸುತ್ತಮುತ್ತಲಿನ 18 ಹಳ್ಳಿಗಳಿಗೆ ಕೇಂದ್ರ ಬಿಂದುವಾಗಿರುವ ಈ ಪಶು ಚಿಕಿತ್ಸಾಲಯವನ್ನು ಮೇಲ್ದರ್ಜೆಗೇರಿಸಬೇಕಾಗಿದೆ. ಕುರಿ, ಆಡು, ಜಾನುವಾರುಗಳಿಗೆ ಕಾಲು- ಬಾಯಿ ಬೇನೆ ಬಂದಿದ್ದು ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ.
ತಡೆ ಗೋಡೆ ಕುಸಿತ: ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಬೇಕಾದರೆ ಲಿಂಗಸ್ಗೂರಿಗೆ ಹೋಗಬೇಕು. ಇದರಿಂದಾಗಿ ರೈತರಿಗೆ ತೊಂದರೆಯಾಗಿದೆ. ಪಶು ಸಂಗೋಪನಾ ಇಲಾಖೆ ನಿರ್ಲಕ್ಷ್ಯದಿಂದ ಸುತ್ತಲೂ ಕಾಂಪೌಂಡ್ ಕುಸಿದಿದೆ. ಮುಖ್ಯರಸ್ತೆಗೆ ಹೊಂದಿಕೊಂಡಿದ್ದ ಕಾಂಪೌಂಡ್ ರಸ್ತೆ ಅಗಲೀಕರಣದಲ್ಲಿ ತೆರವುಗೊಂಡಿದ್ದರಿಂದ ಪಶು ಆಸ್ಪತ್ರೆ ಬೀದಿ ನಾಯಿ, ಹಂದಿಗಳ ತಾಣವಾಗಿದೆ. ಆವರಣದಲ್ಲಿರುವ 3 ಮರಗಳು, ನೆಲಕ್ಕೆ ಉರುಳಿವೆ. ರಾತ್ರಿ ವೇಳೆಯಲ್ಲಿ ಕತ್ತಲು ಇರುವುದರಿಂದ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅವಶ್ಯವಿರುವ ವೈದ್ಯ, ಸಿಬ್ಬಂದಿ ನೇಮಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಭರವಸೆ ಹುಸಿ: ಹಿಂದಿನ ಸರ್ಕಾರದಲ್ಲಿ ಪಶು ಸಂಗೋಪನಾ ಸಚಿವರಾಗಿದ್ದ ರೇವುನಾಯಕ ಬೆಳಮಗಿ ಮುದಗಲ್ ಪಟ್ಟಣಕ್ಕೆ ಆಗಮಿಸಿದಾಗ ಆಸ್ಪತ್ರೆ ನವೀಕರಣಕ್ಕೆ 10 ಲಕ್ಷ ನೀಡುವುದಾಗಿ ಹೇಳಿ ನಾಲ್ಕು ವರ್ಷಗಳೇ ಗತಿಸಿದರೂ ಇದುವರೆಗೂ ನಯಾಪೈಸೆ ಹಣ ಬಿಡುಗಡೆಯಾಗಿಲ್ಲ. ಸಿಬ್ಬಂದಿಯನ್ನು ನೇಮಿಸುವ ಮೂಲಕ ಕಟ್ಟಡ ನವೀಕರಣಕ್ಕೆ ಹಣ ಮಂಜೂರು ಮಾಡಿ ಈ ಭಾಗದ ಗ್ರಾಮೀಣ ಪ್ರದೇಶದ ರೈತು ಜಾನುವಾರುಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯುವಂತೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
Advertisement