ಕೊಪ್ಪಳ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎಡ, ಬಲ ಸೇರಿದಂತೆ ವಿವಿಧ ಕಾಲುವೆಗಳಿಗೆ ನ. 30ರ ವರೆಗೆ ಮುಂಗಾರು ಹಂಗಾಮಿಗೆ ನೀರು ಬಿಡಲು ಶನಿವಾರ ನಡೆದ 99ನೇ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತಿರ್ಮಾನಿಸಲಾಯಿತು.
ತುಂಗಭದ್ರಾ ಕಾಡಾ ಕಚೇರಿಯಲ್ಲಿ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಣ್ಣ ನೀರಾವರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಬಲದಂಡೆ ಕೆಳಮಟ್ಟದ ಕಾಲುವೆಗೆ ಸರಾಸರಿ 600 ಕ್ಯುಸೆಕ್ನಂತೆ 7.2 ಟಿಎಂಸಿ, ಬಲದಂಡೆ ಮೇಲ್ಮಟ್ಟದ ಕಾಲುವೆಗೆ 1000 ಕ್ಯುಸೆಕ್ನಂತೆ 11.04 ಟಿಎಂಸಿ ನೀರು, ರಾಯ ಬಸವಣ್ಣ ಕಾಲುವೆಗೆ ಸರಾಸರಿ 160 ಕ್ಯುಸೆಕ್ನಂತೆ 3 ಟಿಎಂಸಿ ನೀರು, ಎಡದಂತೆ ಕಾಲುವೆ ಹಾಗೂ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಸರಾಸರಿ 3 ಸಾವಿರ ಕ್ಯುಸೆಕ್ನಂತೆ 35.76 ಟಿಎಂಸಿ ನೀರು ನವೆಂಬರ್ ಅಂತ್ಯದವರೆಗೆ ಹರಿಸಲು ನಿರ್ಧರಿಸಲಾಯಿತು ಎಂದು ತಿಳಿಸಿದರು.
ವಿಳಂಬವಾಗಿದೆ: ಜಲಾಶಯಕ್ಕೆ ನೀರು ಹರಿದು ಬರುವುದು ಈ ಸಾರಿ ತಡವಾಗಿದ್ದರಿಂದ ಕಾಲುವೆಗೆ ನೀರು ಹರಿಸುವುದು ವಿಳಂಬವಾಗಿದೆಯೇ ಹೊರತು, ನೀರಾವರಿ ಸಲಹಾ ಸಮಿತಿ ಸಭೆ ನಡೆಸದಿರುವುದಕ್ಕೆ ಅಲ್ಲ ಎಂದು ಸ್ಪಷ್ಟಪಡಿಸಿದ ತಂಗಡಗಿ, ಜುಲೈ 22ರ ವರೆಗೂ 20 ಟಿಎಂಸಿ ನೀರು ಮಾತ್ರ ಜಲಾಶಯಕ್ಕೆ ಹರಿದು ಬಂದಿತ್ತು. ಮುಂಗಾರು ಬೆಳೆಗೆ ನೀರು ಬಿಡಬೇಕೊ ಬೇಡವೊ ಎನ್ನುವ ಚಿಂತೆಯಲ್ಲಿದ್ದೆವು. ಆದರೆ, ಒಂದೇ ವಾರದಲ್ಲಿ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಜಲಾಶಯದ ಭರ್ತಿಯಾಗಿದೆ. ಜುಲೈ 26ರಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ನೀರಾವರಿ ಸಲಹಾ ಸಮಿತಿ ಸಭೆ ನಡೆದ ಮೇಲೆ ನೀರು ಬಿಡಲಾಗುತ್ತದೆ ಎಂದು ಹೇಳಿದ್ದು ಸರಿಯಲ್ಲ. ನೀರಿನ ಲಭ್ಯತೆ ಮತ್ತು ಒಳಹರಿವು ಗಮನಿಸಿ, ಎರಡು ಬೆಳೆಗೆ ನೀರು ಲಭ್ಯವಾಗುವ ನಿರೀಕ್ಷೆಯಿದೆ. ಪ್ರಸಕ್ತ ವರ್ಷದಲ್ಲಿ 144 ಟಿಎಂಸಿ ನೀರು ಲಭ್ಯವಾಗುವ ಅಂದಾಜಿದ್ದು, ರಾಜ್ಯದ ಪಾಲಿಗೆ 94 ಟಿಎಂಸಿ ದೊರೆಯಲಿದೆ. ಇನ್ನೂ ಮಳೆಗಾಲ ಇರುವುದರಿಂದ ಈ ಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ ಎಂದರು.
ಸಭೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಇಕ್ಬಾಲ್ ಅನ್ಸಾರಿ, ಎನ್.ಎಸ್. ಬೋಸರಾಜ, ತಿಪ್ಪರಾಜು, ಹಂಪಯ್ಯ ನಾಯಕ್, ಹಂಪನಗೌಡ ಬಾದರ್ಲಿ, ನಾಗರಾಜ, ಮೃತ್ಯುಂಜಯ ಜಿನಗಾ, ಹಾಲಪ್ಪಾಚಾರ್, ಪ್ರತಾಪ್ಗೌಡ ಉಪಸ್ಥಿತರಿದ್ದರು.