ರಾಯಚೂರು: ಇಲ್ಲಿಗೆ ಸಮೀಪದ ಯರಮರಸ್ ಬಳಿ ನಿರ್ಮಾಣ ಹಂತದಲ್ಲಿರುವ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಕಾಮಗಾರಿಯ ವೇಳೆ ಕ್ರೇನ್ ಉರುಳಿ ಬಿದ್ದು ಸೋಮವಾರ ರಾತ್ರಿ ಕಾರ್ಮಿಕನೊಬ್ಬ ಸಾವಿಗೀಡಾಗಿದ್ದಾನೆ. ಮೃತನ ಕುಟುಂಬಕ್ಕೆ ಪರಿಹಾರಕ್ಕಾಗಿ ಆಗ್ರಹಿಸಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಹೋರಾಟ ನಡೆಸಿದ ಘಟನೆ ನಡೆದಿದೆ.
ಬೃಹತ್ ಗಾತ್ರದ ಹೈಡ್ರೋ ಕ್ರೇನ್ ಮೂಲಕ ಕಬ್ಬಿಣದ ಸರಳು ಮೇಲೆತ್ತುವ ಸಂದರ್ಭ ಕ್ರೇನ್ ಪಲ್ಟಿಯಾಗಿದ್ದು, ಅದರಿಂದ ತೀವ್ರ ಗಾಯಗೊಂಡ ಮಧ್ಯಪ್ರದೇಶ ಮೂಲದ ರೋಣಿ ಸಿಂಗ್(40) ಸಾವಿಗೀಡಾಗಿದ್ದಾನೆ. ಘಟನೆ ನಡೆಯುತ್ತಿದ್ದಂತೆಯೇ ಆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸಿದ್ದಾರೆ.
ಮೃತ ಕಾರ್ಮಿಕನ ಶವವನ್ನು ಕಾಮಗಾರಿ ಸ್ಥಳದಲ್ಲಿರಿಸಿ ಕಾರ್ಮಿಕರು ಪ್ರತಿಭಟಿಸಿ ಕಾರ್ಮಿಕನ ಕುಟುಂಬಕ್ಕೆ 20 ಲಕ್ಷ ಪರಿಹಾರಕ್ಕೆ ಬೇಡಿಕೆಯಿರಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕೆಪಿಸಿ ಅಧಿಕಾರಿಗಳು ಕಾರ್ಮಿಕರ ಮನವೊಲಿಸಲು ಪ್ರಯತ್ನಿಸಿದರೂ ಫಲ ನೀಡಲಿಲ್ಲ.
ಡಿವೈಎಸ್ಪಿ ವಿ.ಬಿ. ಮಡಿವಾಳರ ಸ್ಥಳಕ್ಕೆ ಆಗಮಿಸಿದರೂ ಕಾರ್ಮಿಕರು ತಮ್ಮ ಪಟ್ಟು ಸಡಿಲಿಸಲಿಲ್ಲ. ಅದರಿಂದಾಗಿ ಜಿಲ್ಲಾಧಿಕಾರಿ ವಿಜಯ ಜೋತ್ಸ್ನಾ, ಸಹಾಯಕ ಆಯುಕ್ತ ಎಂ.ಪಿ. ಮಾರುತಿ ಹಾಗೂ ಯಾದಗಿರಿ ಎಸ್ಪಿ ವಂಶಿಕೃಷ್ಣ ಮಧ್ಯಸ್ಥಿಕೆ ನಡೆಸಿ ಮೃತ ಕಾರ್ಮಿಕನ ಕುಟುಂಬಕ್ಕೆ ಕಾಮಗಾರಿ ಗುತ್ತಿಗೆ ಪಡೆದಿದ್ದ ಸಂಸ್ಥೆಯಿಂದ 2 ಲಕ್ಷ, ವಿಮಾ ಯೋಜನೆಯಿಂದ 3.50 ಲಕ್ಷ ಪಾವತಿಸುವ ಭರವಸೆ ನೀಡಿದರೂ ಹೋರಾಟ ಕೈಬಿಡಲಿಲ್ಲ.
ನಂತರ ಕಾರ್ಮಿಕರೊಂದಿಗೆ ನಡೆದ ಮಾತುಕತೆಯಲ್ಲಿ ಕಾಮಗಾರಿ ಗುತ್ತಿಗೆ ಹಿಡಿದ ಸಂಸ್ಥೆಯಿಂದ 10 ಲಕ್ಷ ಪರಿಹಾರ, ವಿಮಾ ಹಣ ಹಾಗೂ ಕುಟುಂಬದ ಒಬ್ಬರಿಗೆ ಕೆಲಸ ಕೊಡಿಸುವ ಭರವಸೆ ದೊರೆತ ನಂತರ ಮಂಗಳವಾರ ಕಾರ್ಮಿಕರು ಪ್ರತಿಭಟನೆ ಹಿಂಪಡೆದರು.
Advertisement