ಮುದಗಲ್: ಸಮೀಪದ ಬಯ್ಯಾಪುರ ಗ್ರಾಪಂ ವ್ಯಾಪ್ತಿಯಲ್ಲಿ ವ್ಯರ್ಥ ಕೊಳವೆ ಬಾವಿ ಬಲಿಗಾಗಿ ಬಾಯಿತೆರೆದು ಕಾದು ಕುಳಿತಿರುವುದು ಬೆಳಕಿಗೆ ಬಂದಿದೆ.
ಬಿಜಾಪುರ, ಬಾಗಲಕೋಟೆಯ ಸೂಳಿಕೇರಿ ಸೇರಿದಂತೆ ರಾಜ್ಯದಲ್ಲಿ ಕೊಳವೆ ಬಾವಿ ದುರಂತಗಳು ಪದೇ ಪದೇ ಜರುಗುತ್ತಿದ್ದು ವ್ಯರ್ಥ ಕೊಳವೆಬಾವಿಗಳನ್ನು ಮುಚ್ಚಿಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಸೂಚಿಸಿದ್ದರೂ ಗ್ರಾಮ ಪಂಚಾಯಿತಿ ಪಿಡಿಒಗಳು ಆದೇಶಕ್ಕೆ ಕಾಸಿನ ಕಿಮ್ಮತ್ತು ನೀಡಿಲ್ಲ.
ಆದರೆ ತಾಲೂಕಾಡಳಿತ ಮತ್ತು ಗ್ರಾಪಂ ಅಧಿಕಾರಿಗಳ ಬೇಜವಬ್ದಾರಿಯಿಂದ ತಾಲೂಕಿನಲ್ಲಿ ಇನ್ನೂ ಅನೇಕ ಜಮೀನು ಮತ್ತು ರಸ್ತೆ ಬದಿಯ ಕುಡಿವ ನೀರಿಗಾಗಿ ಕೊರೆಸಲಾದ ವ್ಯರ್ಥ ಕೊಳವೆ ಬಾವಿ ಮುಚ್ಚಿಸದಿರುವುದು ಕಂಡುಬರುತ್ತಿವೆ.
ಬೇಜವಾಬ್ದಾರಿ: ಬಯ್ಯಾಪುರ ಗ್ರಾಪಂ ವ್ಯಾಪ್ತಿಯ ಖೈರವಾಡಗಿ ತಾಂಡಾ-2(ಕರಡಿಗುಡ್ಡ)ದಲ್ಲಿ ಕೊಳವೆ ಬಾವಿಗೆ ಅಳವಡಿಸಿದ್ದ ಕೈಪಂಪ್ ಅಂತರ್ಜಲ ಕುಸಿತದಿಂದಾಗಿ ಗ್ರಾಪಂ ಸಿಬ್ಬಂದಿ ಕಿತ್ತಿಕೊಂಡು ಹೋಗಿದ್ದಾರೆ. ಆದರೆ ಸುಮಾರು 100 ಅಡಿಗೂ ಅಧಿಕ ಆಳವಿರುವ ಕೊಳವೆಬಾವಿ ಮುಚ್ಚಿಸದಿರುವುದು ಅಧಿಕಾರಿಗಳ ಬೇಜವಬ್ದಾರಿಗೆ ಸಾಕ್ಷಿಯಾಗಿದೆ. ಈ ಬಗ್ಗೆ ಅಲ್ಲಿಯ ನಾಗರಿಕರು ಗ್ರಾಪಂ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಅಧಿಕಾರಿಗಳು ಕೊಳವೆಬಾವಿಯ ಮೇಲೆ ಪ್ಲೇಟ್ ಹಾಕಬೇಕು. ಇಲ್ಲವೇ ಸಂಪೂರ್ಣ ಮುಚ್ಚಿಸಬೇಕೆಂದು ಬಯ್ಯಾಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Advertisement