ಕ.ಪ್ರ. ವಾರ್ತೆ ್ಣ ಮುದಗಲ್ ್ಣ ಆ.5
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆಯಿಲ್ಲ, ವೈದ್ಯರು ಇರುವುದಿಲ್ಲ, ಚಿಕಿತ್ಸೆಗೆ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾರಾಯಣ ಮಂಗಳವಾರ ಭೇಟಿ ನೀಡಿ ತನಿಖೆ ನಡೆಸಿದರು.
ಪಟ್ಟಣದ ಟಿಪ್ಪುಸುಲ್ತಾನ್ ಯುವಕ ಸಂಘ ಹಾಗೂ ಮದನ್‌ಸಾಬ ನಾಯಕ ಲಿಖಿತ ದೂರು ನೀಡಿದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ನಡೆಸಲಾಗುತ್ತಿದೆ. ದೂರುದಾರರನ್ನು ಕರೆಯಿಸಿ ಪರಿಶೀಲನೆ ಮಾಡಲಾಗಿದೆ ಎಂದರು.
ವೈದ್ಯರ ಕೊರತೆ ತೀವ್ರ: ಆಸ್ಪತ್ರೆಯಲ್ಲಿ ಆರು ವೈದ್ಯರು ಇರಬೇಕಾಗಿದ್ದಲ್ಲಿ ಕೇವಲ ಇಬ್ಬರಿದ್ದು ಡಾ. ರಾಜೇಂದ್ರ ಮನಗೂಳಿ ಒಂದು ತಿಂಗಳಿಂದ ರಜೆಯಲ್ಲಿದ್ದಾರೆ. ಇದ್ದೊಬ್ಬ ವೈದ್ಯರು ಮಹಿಳಾ ತಜ್ಞರಾಗಿದ್ದಾರೆ. ಸಜ್ಜಲಗುಡ್ಡದ ವೈದ್ಯ ಡಾ. ವಿಶ್ವನಾಥ ಮಾಟೂರ ಅವರನ್ನು ಎರವಲು ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲೇ ವೈದ್ಯರ ಕೊರತೆಯಿದ್ದು ದೇವದುರ್ಗದಲ್ಲಿ 14 ವೈದ್ಯರ ಪೈಕಿ 1, ಸಿಂಧನೂರಲ್ಲಿ 16 ವೈದ್ಯರಿರಬೇಕಾಗಿದ್ದು ಅಲ್ಲಿಯೂ ಒಬ್ಬರೇ. ಹೀಗೆ ನಾನಾ ಪ್ರಾಥಮಿಕ, ಸಮುದಾಯ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ ಎಂದರು.
ಕೂಡಲೇ ವೈದ್ಯರ ನೇಮಿಸಿ: ಮುದಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆಯಿಲ್ಲ. ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಒಬ್ಬರೇ ವೈದ್ಯರು ರಾತ್ರಿ ಹಗಲು ಸೇವೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇನ್ನೊಬ್ಬ ವೈದ್ಯರನ್ನು ನೇಮಿಸಿ ರಾತ್ರಿ ಸೇವೆಗೆ ನಿಯೋಜಿಸಬೇಕು. ಸುತ್ತಮುತ್ತಲಿನ 60 ಹಳ್ಳಿಗಳಿಗೆ ಕೇಂದ್ರವಾಗಿರುವ ಈ ಸಮುದಾಯ ಕೇಂದ್ರದಲ್ಲಿ ರೋಗಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಸಮರ್ಪಕ ಔಷಧ ಮಂಜೂರು ಮಾಡಬೇಕೆಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಮುಖಂಡ ಎಲ್.ಟಿ. ನಾಯಕ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡಿದರು.
ಆರೋಪ: ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ರಾಜೇಂದ್ರ ಮನಗೂಳಿಯವರು ಕಳೆದ ಮೂರು ತಿಂಗಳಿಂದ ಆಸ್ಪತ್ರೆಗೆ ಬರುತ್ತಿಲ್ಲ ಎಂದು ಸಾರ್ವಜನಿಕರು ಇದೇ ಸಮಯದಲ್ಲಿ ಆರೋಪಿಸಿದರು. ಆಸ್ಪತ್ರೆಯಲ್ಲಿ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿಭಾಯಿಸುತ್ತಿಲ್ಲ. ರಕ್ತ ಸಂಗ್ರಹಣ ಘಟಕ ಇದ್ದರೂ ರಕ್ತ ಸಿಗುವುದಿಲ್ಲ. ರಕ್ತದ ಅಗತ್ಯವಿದ್ದರೆ ಬೇರೆ ಕಡೆಯಿಂದ ಹಣ ನೀಡಿ ತರಬೇಕಾಗಿದೆ ಎಂದರು.
ಶಿಬಿರ: ದೊಡ್ಡ ಆಸ್ಪತ್ರೆ ಇದಾಗಿದ್ದು ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ರಕ್ತ ಸಂಗ್ರಹಣೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾರಾಯಣ ಹೇಳಿದರು. ಸಂಘ ಸಂಸ್ಥೆಗಳು, ಸಾರ್ವಜನಿಕರಿಂದ ರಕ್ತದಾನ ಪಡೆಯಬೇಕು. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಆಸ್ಪತ್ರೆಯಿಂದ ಮಾಡಲಾಗುತ್ತದೆ ಎಂದು ಹೇಳಿದರು.
ಆಸ್ಪತ್ರೆಯ ಎನ್‌ಆರ್‌ಎಚ್‌ಎಂ ಸಿಬ್ಬಂದಿ ಹಾಜರಿ ಪುಸ್ತಕದಲ್ಲಿ ಸಹಿ ಮಾಡದೆ ಇರುವುದನ್ನು ಗಮನಿಸಿದ ಡಾ. ನಾರಾಯಣ, ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಸಹಿ ಮಾಡದೆ ಶಾಲಾ ಮಕ್ಕಳ ಹಾಜರಿಯಂತೆ 'ಪಿ' ಎಂದು ಬರೆದರೆ ಅವರನ್ನು ಅಮಾನತು ಮಾಡುವುದಾಗಿ ಎಚ್ಚರಿಸಿದರು. ಆರ್‌ಸಿಎಚ್ ಡಾ. ವಿಜಯ, ಟಿಎಚ್‌ಒ ಡಾ. ನಂದಕುಮಾರ ಉಪಸ್ಥಿತರಿದ್ದರು.
Advertisement