ಕ.ಪ್ರ. ವಾರ್ತೆ, ರಾಯಚೂರು, ಆ.6
ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಹುದ್ದೆ ಖಾಲಿಯಿದ್ದು, ಕೂಡಲೇ ನೇಮಕ ಮಾಡುವಂತೆ ಆಗ್ರಹಿಸಿ ಬಹುಜನ ಅಭಿವೃದ್ಧಿ ಸಮಿತಿ ಬುಧವಾರ ನಗರದಲ್ಲಿ ಜಿಲ್ಲಾಡಳಿತದ ಮೂಲಕ ಸಿಎಂಗೆ ಮನವಿ ಸಲ್ಲಿಸಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಮಿತಿ ಕಾರ್ಯಕರ್ತರು ಮನವಿ ಸಲ್ಲಿಸಿ, ಜಿಲ್ಲೆಯು ಎಲ್ಲ ರೀತಿಯಿಂದ ಹಿಂದುಳಿದಿದ್ದು, ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಖಾಲಿ ಹುದ್ದೆಗಳ ಭರ್ತಿ ತೀರಾ ಅವಶ್ಯವಾಗಿದೆ. ಆದರೆ ಕಳೆದೊಂದು ತಿಂಗಳಿನಿಂದ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಹುದ್ದೆ ಖಾಲಿಯಿದ್ದು, ಸರ್ಕಾರ ಭರ್ತಿಗೆ ಆಸಕ್ತಿ ತೋರಿಲ್ಲ ಎಂದು ಟೀಕಿಸಿದರು.
ಪರಿಹಾರಕ್ಕೆ ತೊಡಕು: ಈ ಮೊದಲು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದವರು ನಿವೃತ್ತಿ ಹೊಂದಿ ತಿಂಗಳು ಕಳೆದಿದೆ. ಆಗ ಜಿಪಂ ಸಿಇಒ ವಿಜಯ ಜೋತ್ಸ್ನಾ ಅವರಿಗೆ ಪ್ರಭಾರ ವಹಿಸಲಾಗಿದೆ. ಅದೇ ರೀತಿ ಅಪರ ಜಿಲ್ಲಾಧಿಕಾರಿ ನಿವೃತ್ತಿಯಿಂದ ತೆರವಾದ ಸ್ಥಾನದ ಪ್ರಭಾರವನ್ನು ಸಹಾ ಯಕ ಆಯುಕ್ತ ಮಾರುತಿ ಅವರಿಗೆ ವಹಿಸಿದ್ದು, ಅದರಿಂದ ಅವರ ಮೇಲೆ ಕಾರ್ಯಭಾರ ಹೆಚ್ಚಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆಯ ವೈಫಲ್ಯದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಕೃಷಿ ಕೂಲಿಕಾರ್ಮಿಕರು ಗುಳೆ ಹೋಗುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಬರ ಪರಿಹಾರ ಕಾಮಗಾರಿ ಕೈಗೊಳ್ಳುವ ಅವಶ್ಯಕತೆಯಿದೆ. ಆದರೆ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಹುದ್ದೆ ಖಾಲಿಯಿರುವುದು ರೈತರ ಸಮಸ್ಯೆ ಪರಿಹಾರಕ್ಕೆ ತೊಡಕಾಗಿದೆ ಎಂದು ಟೀಕಿಸಿದರು.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಿನ ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ನಡೆಸುವುದಾಗಿ ಸಮಿತಿ ಕಾರ್ಯಕರ್ತರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಎ. ಉರುಕುಂದಪ್ಪ, ಉಪಾಧ್ಯಕ್ಷ ಹಂಪಯ್ಯ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಅರೋಲಿ, ಪ್ರಮುಖರಾದ ಕೃಷ್ಣಾ ಸಾಗರ, ಎಸ್. ರಮೇಶ್, ವೀರೇಶ್, ಚಂದ್ರು, ಶಾಂತಕುಮಾರ್ ಸೇರಿ ಅನೇಕರಿದ್ದರು.
ರಾಜಕೀಯ ನಾಯಕರ ನಿರಾಸಕ್ತಿ
ಜಿಲ್ಲೆಯು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ. ಇಲ್ಲಿನ ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಭಿವೃದ್ಧಿ ಸಾಧ್ಯವಾಗಿಲ್ಲ. ಸದ್ಯ ಜಿಲ್ಲೆಯ ರಾಜಕೀಯ ನಾಯಕರು ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಯ ಹುದ್ದೆ ಭರ್ತಿ ವಿಚಾರದಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು. ಜಿಲ್ಲಾಧಿಕಾರಿಗಳ ನೇಮಕಾತಿ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಶಾಸಕರು ಆಸಕ್ತಿ ಪ್ರದರ್ಶಿಸದಿರುವುದರಿಂದಲೇ ನೇಮಕಾತಿಯಲ್ಲಿ ವಿಳಂಬವಾಗಿದೆ ಎಂದು ಆರೋಪಿಸಿದ ಸಂಘಟನೆಯ ಕಾರ್ಯಕರ್ತರು, ಜನಪ್ರತಿನಿಧಿಗಳು ಈ ವಿಚಾರದಲ್ಲಿ ಮೌನವಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಟೀಕಿಸಿದರು.
ಅಭಿವೃದ್ಧಿ ಕಾಮಗಾರಿ ತೀವ್ರ ಹಿನ್ನಡೆ
ಸದ್ಯ ಪ್ರಭಾರ ವಹಿಸಿಕೊಂಡಿರುವ ಇಬ್ಬರೂ ಅಧಿಕಾರಿಗಳಿಗೆ ಕಾರ್ಯಭಾರ ಹೆಚ್ಚಿದೆ. ಅದರಿಂದಾಗಿ ಅವರು ತಮ್ಮ ಮೂಲ ಹುದ್ದೆಯಲ್ಲಿಯೂ ಸಮರ್ಪಕ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಅದರಿಂದಾಗಿ ಸಾರ್ವಜನಿಕರಿಗೂ ತೊಂದರೆಯಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ತೀವ್ರ ಹಿನ್ನಡೆಯಾಗಿದೆ ಎಂದು ದೂರಿದರು. ಬಡವರು, ದೀನ ದಲಿತರ, ಕೂಲಿಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳಿಲ್ಲದಂತಾಗಿದೆ. ಜಿಲ್ಲಾಡಳಿತದ ಒಟ್ಟಾರೆ ಕಾರ್ಯನಿರ್ವಹಣೆಯೇ ಸ್ಥಗಿತಗೊಂಡಂತಾಗಿದೆ. ಕಾರಣ ಕೂಡಲೇ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳ ಹುದ್ದೆ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಆ ಮೂಲಕ ಜಿಲ್ಲೆಯ ಅಭಿವಙೃದ್ಧಿಗೆ ಮುಂದಾಗುವಂತೆ ಹೋರಾಟಗಾರರು ಒತ್ತಾಯಿಸಿದರು.
Advertisement