ರಾಯಚೂರು: ಕಡುಬಡವರಿಗೆ ಬಿಪಿಎಲ್ ಚೀಟಿ ವಿತರಿಸದೇ ಎಪಿಎಲ್ ಪಡಿತರ ಚೀಟಿ ನೀಡಲಾಗುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಬುಧವಾರ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಸಿಂಧನೂರು ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಕಡುಬಡವರು ಬಿಪಿಎಲ್ ಕಾರ್ಡ್ ಪಡೆಯಲು ಗ್ರಾಪಂ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಆದರೆ ಎಪಿಎಲ್ ಕಾರ್ಡು ವಿತರಿಸಿದೆ ಎಂದು ದೂರಿದರು.
ಸರ್ಕಾರದ ಉದ್ದೇಶಕ್ಕೆ ಹಿನ್ನಡೆ: ಗ್ರಾಮದ ಅನೇಕರು ಕಡುಬಡವರಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಅಂಥವರೇ ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ್ದು, ಅಂಥವರಿಗೆ ಆಡಳಿತವು ಎಪಿಎಲ್ ಪಡಿತರ ಚೀಟಿ ನೀಡಿದೆ. ರಾಜ್ಯ ಸರ್ಕಾರ ಹಸಿವು ಮುಕ್ತ ರಾಜ್ಯದ ಮಾತನಾಡುತ್ತಿದೆ. ಆದರೆ ಅಧಿಕಾರಿಗಳ ಕಾರ್ಯವೈಖರಿಯಿಂದ ಸರ್ಕಾರದ ಉದ್ದೇಶಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ದೂರಿದರು. ಆಹಾರ ಇಲಾಖೆಯು ಪಡಿತರ ಚೀಟಿ ನೀಡಿಕೆಗೆ ಸಂಬಂಧಿಸಿ ನಡೆಸಿದ ಅರ್ಜಿಗಳ ಪರಿಶೀಲನೆ ಮತ್ತು ಸಮೀಕ್ಷೆ ವೇಳೆ ಅಧಿಕಾರಿಗಳು ಲೋಪ ಎಸಗಿದ್ದಾರೆ. ಅದರಿಂದಾಗಿ ಕಡುಬಡವರು ಬಿಪಿಎಲ್ ಪಡಿತರ ಚೀಟಿಯಿಂದ ವಂಚಿತರಾಗಿದ್ದಾರೆಂದು ಆರೋಪಿಸಿದರು. ಕಾರಣ ಕೂಡಲೇ ಜಿಲ್ಲಾಡಳಿತ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಬಿಪಿಎಲ್ ಪಡಿತರ ಚೀಟಿಗೆ ಸಲ್ಲಿಕೆಯಾದ ಅರ್ಜಿಗಳನ್ನು ಮರುಪರಿಶೀಲಿಸಬೇಕು. ಪರಿಶೀಲನೆ ವೇಳೆ ಲೋಪ ಎಸಗಿದ ಅಧಿಕಾರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೋರಾಟಗಾರರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರಾದ ಮಲ್ಲೇಶ್, ಯಂಕಪ್ಪ ಭೇರಗಿ ಸೇರಿದಂತೆ ಅನೇಕರಿದ್ದರು.
Advertisement