ಲಿಂಗಸ್ಗೂರು: ತಾಲೂಕಿನ ರಾಂಪೂರ ಏತ ನೀರಾವರಿ ಕಾಲುವೆಗೆ ನೀರು ಹರಿಸುವ ಮೂಲಕ ರೈತರ ಬಿತ್ತನೆ ಕಾರ್ಯಕ್ಕೆ ಅನುಕೂಲ ಕಲ್ಪಿಸಬೇಕೆಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಒತ್ತಾಯಿಸಿದರು.
ರಾಂಪೂರ ಏತ ನೀರಾವರಿ ಸ್ಥಾವರಕ್ಕೆ ಬುಧವಾರ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಸಾಗರ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹಗೊಂಡಿದ್ದು, ರಾಂಪೂರ ಏತ ನೀರಾವರಿ ಸ್ಥಾವರದ ಮೋಟಾರ್ ಪಂಪ್ ಅಳವಡಿಕೆ ಹಾಗೂ ಇತರೆ ಕೆಲಸ ಶೀಘ್ರ ಪೂರ್ಣಗೊಳಿಸಿ ಈಗಿರುವ ಹಳೆ ಪೈಪ್‌ಲೈನ್ ಮುಖಾಂತರವೇ ಕಾಲುವೆಗೆ ನೀರು ಹರಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ನೀರು ಹರಿಸಲು ವಿಳಂಬ ಮಾಡಿದರೆ ಕೃಷಿ ಚಟುವಟಿಕೆ ಕೂಡ ವಿಳಂಬಗೊಳ್ಳಲಿದೆ. ಇದರಿಂದ ರೈತರು ರೊಚ್ಚಿಗೇಳುವ ಸಾಧ್ಯತೆಯಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದರು.
ಜಲಾಶಯದ ರಸ್ತೆ ಬದಿ ನಿರ್ಮಿಸಿದ ಕಾಂಪೌಂಡ್ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ನಿಯಮಾನುಸಾರ ಸಿಮೆಂಟ್, ಉಸುಕು ಹಾಕದೆ ಹಾಗೂ ಸರಿಯಾಗಿ ಕ್ಯೂರಿಂಗ್ ಮಾಡದ ಪರಿಣಾಮ ಕಂಪೌಂಡ್ ಗೋಡೆ ಕಳಪೆ ಗುಣಮಟ್ಟದಿಂದ ಕೂಡಿದೆ. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಕಾರ್ಯನಿರ್ವಾಹಕ ಅಭಿಯಂತರ ಮೃತ್ಯುಂಜಯರಿಗೆ ಸೂಚಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ಹನುಮಂತಪ್ಪ ತೊಗರಿ, ಎಂ.ಡಿ. ರಫೀ, ಚೆನ್ನಾರೆಡ್ಡಿ ಬಿರಾದಾರ ಸೇರಿದಂತೆ ಇದ್ದರು.
Advertisement