ಕ.ಪ್ರ. ವಾರ್ತೆ , ರಾಯಚೂರು , ಜು. 1
ಅಸಮರ್ಪಕ ಹಾಗೂ ತಡವಾಗಿ ಮಾಹಿತಿ ನೀಡಿದ್ದಕ್ಕೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಅಧ್ಯಕ್ಷರು. ಹಳೆಯ ವಿಷಯಗಳ ಬಗ್ಗೆಯೇ ಪದೇ ಪದೇ ಚರ್ಚೆಗೆ ಮುಂದಾಗುತ್ತಿರುವುದಕ್ಕೆ ಸದಸ್ಯರ ಬೇಸರ. ಬಿಆರ್ಜಿಎಫ್ ಅನುದಾನದ ಬಳಕೆಯಲ್ಲಿ ಹಿನ್ನಡೆಗೆ ಅಧಿಕಾರಿಗಳ ತರಾಟೆ. ಕಾಟಾಚಾರಕ್ಕೆ ನಡೆದ ಸಭೆಯಲ್ಲಿ ನಿರ್ಮಿತಿ ಕೇಂದ್ರಕ್ಕೆ ನೀಡಿದ ಅನುದಾನ ಹಿಂಪಡೆಯಲು ನಿರ್ಧಾರ.
- ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಜಿಲ್ಲಾ ಯೋಜನಾ ಸಮಿತಿ ಸಭೆ ನಡೆದ ರೀತಿಯಿದು.
ಸಭೆಯಲ್ಲಿ ಮಾತನಾಡಿದ ಅಧ್ಯಕ್ಷೆ ಲಲಿತಮ್ಮ ಅವರು, ಅಧಿಕಾರಿಗಳು ಜಿಲ್ಲಾ ಯೋಜನಾ ಸಮಿತಿ ಸಭೆಗೆ ಎರಡು ದಿನ ಮೊದಲಷ್ಟೇ ಸಭೆಯಲ್ಲಿ ಚರ್ಚಿಸಲಾಗುವ ವಿಷಯಗಳ ಬಗ್ಗೆ ತಮಗೆ ಮಾಹಿತಿ ನೀಡಿದ್ದಾರೆ. ಅದೂ ಅಪೂರ್ಣವಾಗಿದೆ. ಹೀಗಾದರೆ ಸಭೆಗೆ ಸಿದ್ಧತೆ ಮಾಡಿಕೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಜೋತ್ಸ್ನಾ, ಸಂಬಂಧಿಸಿದ ಇಲಾಖೆಯವರು ತಡವಾಗಿ ಮಾಹಿತಿ ಒದಗಿಸಿದ್ದರಿಂದ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಸಮಾಧಾನ ಪಡಿಸಲೆತ್ನಿಸಿದರು. ಆದರೆ ಅದರಿಂದ ತೃಪ್ತರಾಗದ ಜಿಪಂ ಅಧ್ಯಕ್ಷೆ ಅಧಿಕಾರಿಗಳನ್ನು ಜಿಪಂ ಸಿಇಒ ಹಿಡಿತದಲ್ಲಿರಿಸಿಕೊಂಡಿಲ್ಲ. ಅದರಿಂದಾಗಿ ಅಧಿಕಾರಿಗಳು ಸಭೆಗೆ ಸರಿಯಾಗಿ ಹಾಜರಾಗದೇ ಮಾಹಿತಿಯನ್ನೂ ನೀಡದೇ ಜನಪ್ರತಿನಿಧಿಗಳ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆಂದು ತರಾಟೆಗೆ ತೆಗೆದುಕೊಂಡರು.
ಅಸಮಾಧಾನ: ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಜಿಪಂ ಸದಸ್ಯ ಅಸ್ಲಂ ಪಾಷಾ ಮತ್ತು ಅಚ್ಯುತ ರೆಡ್ಡಿ, ಕಳೆದ ಮೂರು ವರ್ಷಗಳಿಂದ ಬಿಆರ್ಜಿಎಫ್ ಯೋಜನೆ ಅಡಿ ರಕ್ತದ ಕಣಗಳ ಪ್ರತ್ಯೇಕಿಸುವ ಘಟಕದ ಸ್ಥಾಪನೆ, ಬಿಆರ್ಜಿಎಫ್ ಅನುದಾನದ ಬಳಕೆ ಕುರಿತು ಮಾತ್ರ ಚರ್ಚಿಸಲಾಗುತ್ತಿದೆ. ಮೇಲಿಂದ ಮೇಲೆ ಇದೇ ವಿಷಯಗಳ ಬಗ್ಗೆ ಚರ್ಚಿಸುವಂಥ ಸ್ಥಿತಿಯಿದ್ದರೆ ಸಭೆ ನಡೆಸುವುದೇ ವ್ಯರ್ಥ. ಅಧಿಕಾರಿಗಳು ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸದಿರುವುದೇ ಇದಕ್ಕೆ ಮೂಲ ಕಾರಣ ಎಂದು ಆರೋಪಿಸಿದರು.
ಈ ಕುರಿತು ಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾರಾಯಣ್ ಹಾಗೂ ಜಿಪಂ ಸಿಇಒ ಜೋತ್ಸ್ನಾ ಅವರು, ರಕ್ತದ ಕಣ ಪ್ರತ್ಯೇಕಿಸುವ ಘಟಕಕ್ಕೆ ಜಿಪಂನಿಂದ ಬಿಆರ್ಜಿಎಫ್ ಅಡಿ ಅನುದಾನ ಒದಗಿಸಿದ್ದು, ಘಟಕ ಸ್ಥಾಪನೆಗೆ ಸಕಲ ಸಿದ್ಧತೆಗಳು ಜಾರಿಯಲ್ಲಿವೆ ಎಂದು ವಿವರಿಸಿದರು.
ಬಳಕೆ ವೈಫಲ್ಯಕ್ಕೆ ಟೀಕೆ: ಕಳೆದ ವರ್ಷ ಹಿಂದುಳಿದ ಆರು ಜಿಲ್ಲೆಗಳ ಪೈಕಿ ರಾಯಚೂರು ಜಿಲ್ಲೆಯಿಂದಲೇ ಬಿಆರ್ಜಿಎಫ್ ಯೋಜನೆ ಅಡಿ ಮೊದಲಿಗೆ ಕ್ರಿಯಾಯೋಜನೆ ಸಲ್ಲಿಸಿದ್ದರೂ ಕೇಂದ್ರದಿಂದ ಅನುದಾನ ಬಿಡುಗಡೆಯಾಗಿಲ್ಲ ಎಂದು ಜಿಪಂ ಯೋಜನಾಧಿಕಾರಿ ಟಿ.ರೋಣಿ ಸಭೆಗೆ ತಿಳಿಸಿದರು.
ಇದರಿಂದ ಅಸಮಾಧಾನಗೊಂಡ ಸದಸ್ಯ ಎಚ್.ಬಿ. ಮುರಾರಿ, ಕಳೆದ ವರ್ಷ ಅನುದಾನ ಬಿಡುಗಡೆ ಆಗದಿರುವುದಕ್ಕೆ ಅದರ ಹಿಂದಿನ ವರ್ಷದ ಅನುದಾನ ಬಳಕೆಯಲ್ಲಿ ಜಿಪಂ ಆಡಳಿತ ತೋರಿದ ಅಸಡ್ಡೆಯೇ ಕಾರಣ ಎಂದು ಟೀಕಿಸಿ ಪೂರ್ಣ ಅನುದಾನ ಬಳಕೆ ಮಾಡಿಕೊಳ್ಳದ ಹಿನ್ನೆಲೆ ಕೇಂದ್ರ ಸರ್ಕಾರ ಹೊಸದಾಗಿ ಹಣ ನೀಡಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯ ಕಾರಣ: ಇದಕ್ಕೆ ಪ್ರತಿಕ್ರಿಯಿಸಿದ ರೋಣಿ, ರಾಜ್ಯದ ಎಲ್ಲ 6 ಜಿಲ್ಲೆಗಳಿಗೆ ಕೇಂದ್ರದ ಅನುದಾನದ ಬಿಡುಗಡೆಯಲ್ಲಿ ಕಡಿತಗೊಳಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು. ಅದರಿಂದ ಅಸಮಾಧಾನಗೊಂಡ ಸದಸ್ಯರು, ರಾಯಚೂರು ಹೊರತುಪಡಿಸಿ ಇನ್ನುಳಿದ 5 ಜಿಲ್ಲೆಗಳಿಗೆ ಈ ಅನುದಾನ ಬಂದಿದೆ. ಆದರೆ ರಾಯಚೂರಿಗೆ ಮಾತ್ರ ಮಂಜೂರಾಗದಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಜಿಪಂ ಸಿಇಒ ಮಧ್ಯಪ್ರವೇಶಿಸಿ ಪ್ರಸಕ್ತ ವರ್ಷ ಬಿಆರ್ಜಿಎಫ್ ಅಡಿ 26 ಕೋಟಿ ಲಭ್ಯವಿದೆ ಎಂದು ಸಭೆಗೆ ತಿಳಿಸಿದರು.
ಗ್ರಾಪಂ ಪಿಡಿಒಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವರಿಗೆ ವಾಕಿ ಟಾಕಿ ನೀಡಲಾಗಿದೆ. ಆದರೆ ನಿಗಾ ಮಾತ್ರ ಇಲ್ಲ. ಕಚೇರಿಗಳಲ್ಲಿ ಪಿಡಿಒಗಳು ಹಾಜರಿರದೇ ಹೊಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಪರಿಣಾಮ ಅಭಿವೃದ್ಧಿಗೆ ಹೊಡೆತ ಬಿದ್ದಿದೆ ಎಂದು ಸದಸ್ಯರು ಸಭೆಗೆ ದೂರಿದರು.
ಅವ್ಯವಹಾರ: ನಿರ್ಮಿತಿ ಕೇಂದ್ರದಲ್ಲಿನ ಅವ್ಯವಹಾರದ ತನಿಖೆ ಜಾರಿಯಲ್ಲಿರುವುದರಿಂದ ಜಿಪಂನಿಂದ ನಿರ್ಮಿತಿ ಕೇಂದ್ರಕ್ಕೆ ನೀಡಿದ್ದ ಬಳಕೆಯಾಗದ ಅನುದಾನವನ್ನು ಹಿಂಪಡೆದು ಬೇರೆ ಕಾಮಗಾರಿಗಳಿಗೆ ಬಳಸಲು ಸಭೆಯಲ್ಲಿ ಸಮ್ಮತಿ ಸೂಚಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಟಿ.ರೋಣಿ, ಜಿಲ್ಲೆಯ ಸಮಗ್ರ ಅಭಿವೃದ್ಧಿ ವರದಿ ಮುಂದಿನ ಒಂದೆರಡು ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷೆ ಲಲಿತಮ್ಮ, ಉಪಾಧ್ಯಕ್ಷ ಕೆ.ಶರಣಪ್ಪ, ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ರಿಮ್ಸ್ ಮೇಲೆ ನಿರಾಸಕ್ತಿ
ಸದಸ್ಯರು ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಅಧಿಕಾರಿಗಳಿಂದ ಇಂಥದ್ದೇ ಮಾತು ಕೇಳಿಬಂದಿದೆ. ಘಟಕ ಸ್ಥಾಪನೆಗೆ ರಿಮ್ಸ್ ಕಾಲೇಜು ಆಸಕ್ತಿ ತೋರದಿದ್ದಲ್ಲಿ ಅನುದಾನ ಮರಳಿ ಪಡೆಯುವಂತೆ ಸಭೆಯಲ್ಲಿ ಒತ್ತಾಯಿಸಿದರು. ನಂತರ ಸಭೆಯಲ್ಲಿ ಮಾತನಾಡಿದ ಜಿಪಂ ಸದಸ್ಯ ಎಚ್.ಬಿ. ಮುರಾರಿ, ನಗರದಲ್ಲಿ ಸಿಟಿ ಸ್ಕ್ಯಾನ್ ಯಂತ್ರ ಸ್ಥಾಪಿಸಿದ್ದು, ಕಟ್ಟಡ ಕಾಮಗಾರಿಗೆ 3 ಲಕ್ಷ ಅಗತ್ಯವಿದ್ದು, ತಾಪಂಗಳಿಂದ ಈ ಹಣ ದೊರಕಿಸುವಂತೆ ಆಗ್ರಹಿಸಿದರು.