ಸಿಂಧನೂರಿಗೆ ಕಸದ ತಿಲಕ!

Updated on: 

ಪೌರ ಕಾರ್ಮಿಕರ ಕೊರತೆ, ನಗರಸಭೆ ಸಿಬ್ಬಂದಿದಿವ್ಯ ನಿರ್ಲಕ್ಷ್ಯ, ವಿಲೇವಾರಿಯಾಗದ ತ್ಯಾಜ್ಯ
31 ವಾರ್ಡ್‌ಗಳಲ್ಲಿ ಕಸದ ತೊಟ್ಟಿಗಳೇ ಮಾಯ, ಕಡಿಮೆ ಕೂಲಿ ಕಾರ್ಮಿಕರ ಕೊರತೆ
ಅಲ್ಪ ಮಳೆ ಸುರಿದರೂ ಚರಂಡಿ ನೀರು ರಸ್ತೆಗೆ, ತರಕಾರಿ ಮಾರುಕಟ್ಟೆ ಪರಿಸ್ಥಿತಿ ದೇವರಿಗೇ ಪ್ರೀತಿ

ಸಿಂಧನೂರು: ಪೌರಕಾರ್ಮಿಕರ ಕೊರತೆ, ಮಾಯವಾದ ಕಸದ ತೊಟ್ಟಿಗಳು. ಕಸದ ತೊಟ್ಟಿಯಿದ್ದ ಜಾಗದಲ್ಲಿ ಸಂಗ್ರಹಗೊಳ್ಳುವ ತ್ಯಾಜ್ಯದ ಪರಿಣಾಮ ನಗರವೇ ಕಸದ ತೊಟ್ಟಿಯಂತಾಗಿದೆ. ನಗರದ ಸ್ವಚ್ಛತೆಗಿಲ್ಲ ನಗರಸಭೆಯ ಗಮನ. ಪರಿಣಾಮ ಉಸಿರುಗಟ್ಟಿಸುವ ವಾತಾವರಣ.
- ಸಿಂಧನೂರು ನಗರದಲ್ಲಿ ತ್ಯಾಜ್ಯ ವಿಲೇವಾರಿಯತ್ತ ತೋರಿದ ಅಸಡ್ಡೆಯ ಸೈಡ್‌ಎಫೆಕ್ಟ್ ಇದು.
ತ್ಯಾಜ್ಯ ವಿಲೇವಾರಿಗೆ ಆಡಳಿತ ಆಸಕ್ತಿ ತೋರದಿರುವುದು ಸ್ಪಷ್ಟ. ಹಾಗಾಗಿ ತ್ಯಾಜ್ಯ ಚರಂಡಿ ಸೇರಿ ದುರ್ನಾತ ಹರಡುತ್ತಿದೆ. ಜನರ ಜೀವನವನ್ನು ನರಕ ಸದೃಶಗೊಳಿಸಿದೆ. ನಗರದ 31 ವಾರ್ಡುಗಳ ಸ್ವಚ್ಛತೆಯ ಕಾರ್ಯವನ್ನು 18 ಪೌರ ಕಾರ್ಮಿಕರು, 56 ದಿನಗೂಲಿ ನೌಕರರು ನೋಡಿಕೊಳ್ಳುವಂಥ ಸ್ಥಿತಿಯಿದೆ. ಹಾಗಾಗಿ ನಗರದ ಎಲ್ಲ ವಾರ್ಡ್‌ಗಳಲ್ಲಿ ತ್ಯಾಜ್ಯ ಸಮರ್ಪಕ ರೀತಿಯಿಂದ ವಿಲೇವಾರಿಯಾಗದೆ, ಚರಂಡಿ ಸೇರಿ ಅಲ್ಪ ಮಳೆ ಸುರಿದರೂ ಚರಂಡಿಯ ಕೊಳಕು ನೀರು ರಸ್ತೆಗೆ ನುಗ್ಗುತ್ತದೆ. ಪರಿಸ್ಥಿತಿ ಅನಾರೋಗ್ಯಕರವಾಗುತ್ತದೆ.
ಸಿಂಧನೂರಿನ ಸಹನಾ ಆಸ್ಪತ್ರೆ ಬಳಿ ತ್ಯಾಜ್ಯದಿಂದ ತುಂಬಿದ ಚರಂಡಿ ಸ್ವಚ್ಛತೆ.
ಚರಂಡಿಯಲ್ಲಿಯೂ ತ್ಯಾಜ್ಯ ಸಂಗ್ರಹ.
ಹಳೇ ಬಜಾರಿನಲ್ಲಿ ಅಲ್ಪ ಮಳೆಗೆ ಉಕ್ಕಿ ಹರಿಯುವ ಚರಂಡಿ ನೀರು.(ಸಂಗ್ರಹ ಚಿತ್ರ).
ಕೊಳಕು ಮಾರುಕಟ್ಟೆ
ನಗರದ ತರಕಾರಿ ಮಾರುಕಟ್ಟೆಯಾಗಬೇಕಾಗಿದ್ದ ದೇವರಾಜು ಅರಸು ಮಾರುಕಟ್ಟೆ ತರಕಾರಿ ತ್ಯಾಜ್ಯ ವಿಲೇವಾರಿ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ನಿತ್ಯವೂ ಟನ್‌ಗಟ್ಟಲೆ ತರಕಾರಿ ತ್ಯಾಜ್ಯ, ಕಸ ಸುರಿಯಲಾಗುತ್ತಿದ್ದು, ಸ್ವಚ್ಛತೆಯಿಲ್ಲದ್ದರಿಂದ ಮಾರುಕಟ್ಟೆ ಕೊಳಚೆ ಪ್ರದೇಶದಂತಾಗಿದೆ. ನಗರಸಭೆಯವರು ವಾರಕ್ಕೊಮ್ಮೆ ಕೂಡ ಸ್ವಚ್ಛತೆಗೆ ಗಮನಹರಿಸುತ್ತಿಲ್ಲ. ಇದರ ಪಕ್ಕದಲ್ಲಿಯೇ ಸುಕಾಲಪೇಟೆ ಹಿರಿಯ ಪ್ರಾಥಮಿಕ ಶಾಲೆಯಿದ್ದು ಮಕ್ಕಳು ಅನಾರೋಗ್ಯಕರ ಸ್ಥಿತಿಯಲ್ಲಿಯೇ ಕಲಿಯುತ್ತಿದ್ದಾರೆ. ನಗರದ ಬಹುತೇಕ ವಾರ್ಡುಗಳಲ್ಲಿ ಕಸದ ತೊಟ್ಟಿಗಳು ತುಂಬಿ ತ್ಯಾಜ್ಯ, ಕಸ ಹೊರಚೆಲ್ಲುತ್ತಿದ್ದರೂ ನಗರಸಭೆಗೆ ಮಾತ್ರ ಅತ್ತ ಗಮನವಿಲ್ಲ.
ಸಿಬ್ಬಂದಿ ಕೊರತೆ
ನಗರಸಭೆಯಲ್ಲಿ ತ್ಯಾಜ್ಯ ಮತ್ತು ಕಸದ ವಿಲೇವಾರಿಗೆ ಕನಿಷ್ಠ 116 ಸಿಬ್ಬಂದಿ ಅವಶ್ಯ. ಆದರೆ 42 ಜನರ ಕೊರತೆಯಿದೆ. ಕಸವನ್ನು ಮಲ್ಲಾಪುರ ಬಳಿ ನಗರಸಭೆಯಿಂದ ಖರೀದಿಸಿದ 12 ಎಕರೆ ಪ್ರದೇಶದಲ್ಲಿ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭೆ ಹೇಳಿದೆ. ಆದರೆ ಅದು ಕಾಟಾಚಾರಕ್ಕೆ ನಡೆಯುವ ಕಾರ್ಯ ಎಂಬುದು ಜನರ ಆರೋಪ. 'ಸರ್ಕಾರವು ಕಾರ್ಮಿಕರಿಗೆ ದಿನಕ್ಕೆ 216 ಕೂಲಿ ನಿಗದಿ ಮಾಡಿದೆ. ಇಷ್ಟೊಂದು ಕಡಿಮೆ ಮೊತ್ತಕ್ಕೆ ತ್ರಾಸದಾಯಕ ಕೆಲಸ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಕೂಲಿ ದರದ ಹೆಚ್ಚಳ ಅವಶ್ಯ' ಎಂದು ನಗರಸಭೆ ನೈರ್ಮಲ್ಯ ನಿರೀಕ್ಷಕ ಶರಣಬಸಯ್ಯ ಹೇಳುತ್ತಾರೆ. ಒಂದೆಡೆ ಸಿಬ್ಬಂದಿಯ ಕೊರತೆ. ಮತ್ತೊಂದೆಡೆ ನಗರಸಭೆಯ ನಿರ್ಲಕ್ಷ್ಯ, ಜನಜಾಗೃತಿಯ ಅಭಾವದಿಂದ ಅಭಿವೃದ್ಧಿ ಹೊಂದುತ್ತಿರುವ ಸಿಂಧನೂರಿಗೆ ತ್ಯಾಜ್ಯದ ಸಮರ್ಪಕ ವಿಲೇವಾರಿಯ ಸಮಸ್ಯೆ ಬೃಹದಾಕಾರವಾಗಿ ಕಾಡುತ್ತಿರುವುದಂತೂ ವಾಸ್ತವ.
ರಸ್ತೆಗೆ ತ್ಯಾಜ್ಯ
ನಗರದಲ್ಲಿ ಆಗೀಗ ಸುರಿಯುವ ಅಲ್ಪ ಮಳೆಗೂ ಚರಂಡಿಗಳು ತ್ಯಾಜ್ಯದಿಂದ ಮುಚ್ಚಿ ಹೋದ ಪರಿಣಾಮ ಕೊಳಕು ನೀರು ರಸ್ತೆಗೆ ನುಗ್ಗುತ್ತದೆ. ಅದರಲ್ಲೂ ನಗರದ ಹಳೇ ಬಜಾರ್, ನಗರಸಭೆ ಬಳಿ, ಸತ್ಕಾರ ಹೋಟೆಲ್ ಹತ್ತಿರ, ವೆಂಕಟರಾವ್ ಕಾಲನಿ ಸೇರಿ ವಿವಿಧ ಪ್ರದೇಶದಲ್ಲಿ ಅಲ್ಪ ಮಳೆಗೆ ಪ್ರವಾಹ ಸ್ಥಿತಿ ನಿರ್ಮಾಣವಾಗುತ್ತದೆ. ಆದರೂ ನಗರಸಭೆ ಮಾತ್ರ ನಿದ್ದೆಯಿಂದೇಳುವುದಿಲ್ಲ.
ಜನರ ಅಸಹಕಾರ?
ಬೆಳಗ್ಗೆ ನಗರಸಭೆಯ ಸಿಬ್ಬಂದಿ ಕಸ, ತ್ಯಾಜ್ಯ ವಿಲೇವಾರಿ ಮಾಡಿದರೆ ಅಂಗಡಿಯವರು ಮಧ್ಯಾಹ್ನದ ವೇಳೆಗೆ ರಸ್ತೆಗೆ ಕಸ ಸುರಿಯುತ್ತಾರೆ ಎಂಬುದು ನಗರಸಭೆಯ ಆರೋಪ. ಹಾಗೆಯೇ ತ್ಯಾಜ್ಯದ ವಿಲೇವಾರಿ ನಿಟ್ಟಿನಲ್ಲಿ ಜನರ ಸಹಕಾರವೂ ಅಗತ್ಯ ಎಂಬ ಮಾತು ಕೇಳಿಬಂದಿದೆ.
ತೊಟ್ಟಿಗಳು ಮಾಯ
ಪ್ರತಿನಿತ್ಯ ನಗರದ 31 ವಾರ್ಡ್‌ಗಳಿಂದ 25ರಿಂದ 28 ಟನ್ ತ್ಯಾಜ್ಯ, ಕಸ ಸಂಗ್ರಹವಾಗುತ್ತದೆ. ನಗರಸಭೆಯವರು ನಗರದ ವಿವಿಧೆಡೆ ಈ ಮೊದಲು ಅಲ್ಲಲ್ಲಿ ಕಸ ಮತ್ತು ತ್ಯಾಜ್ಯ ಸಂಗ್ರಹಿಸುವ ಒಟ್ಟು 20 ತೊಟ್ಟಿಗಳನ್ನಿಟ್ಟಿದ್ದರು. ಆದರೆ ಈಗ ಬಹುತೇಕ ಕಡೆಗಿನ ತೊಟ್ಟಿಗಳೇ ಮಾಯವಾಗಿವೆ. ಹಾಗಾಗಿ ಅವುಗಳಿದ್ದ ಸ್ಥಳದಲ್ಲೇ ಕಸ ತಂದು ಸುರಿಯಲಾಗುತ್ತಿದೆ. ತೆರವು ಮಾತ್ರ ಆಗುತ್ತಿಲ್ಲ.



-  ಪ್ರಹ್ಲಾದ ಗುಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com