ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಜು. 3
ನೌಕರರ ಬಾಕಿ ವೇತನ ಪಾವತಿಗೆ ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಗುರುವಾರ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಕಾರ್ಯಕರ್ತರು ಧರಣಿ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯಿಂದ ನಿರ್ವಹಿಸುತ್ತಿರುವ ವಸತಿ ನಿಲಯಗಳ ನೌಕರರಿಗೆ ಕಳೆದ ಅನೇಕ ತಿಂಗಳಿಂದ ಕೆಲವೆಡೆ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಹಾಸ್ಟೆಲ್ ನೌಕರರ ಐದಾರು ತಿಂಗಳ ವೇತನ ಬಾಕಿ ಉಳಿಸಿಕೊಂಡಿದ್ದು ಅದರಿಂದ ಕುಟುಂಬದವರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಕೂಡಲೇ ಬಾಕಿರುವ ನೌಕರರ ವೇತನವನ್ನು ಪಾವತಿಸಬೇಕು. ಅವರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 5ನೇ ತಾರೀಕಿನೊಳಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
10 ಸಾವಿರ ಕನಿಷ್ಠ ವೇತನಕ್ಕೆ ಆಗ್ರಹ: ಬ್ಯಾಂಕ್ ಖಾತೆ ಹೊಂದಿಲ್ಲದ ಕಾರ್ಮಿಕರ ಖಾತೆಗಳನ್ನು ತಕ್ಷಣದಲ್ಲಿ ತೆಗೆಸಬೇಕು. ಪಿಎಫ್ ಹಣವನ್ನು ಕಾರ್ಮಿಕರ ಖಾತೆಗೆ ಜಮಾ ಮಾಡಿ ಅದರ ದಾಖಾಲಾತಿಗಳನ್ನು ಅವರಿಗೆ ನೀಡಬೇಕು. ಇಎಸ್ಐ ಕಾರ್ಡ್ ಕೂಡಲೇ ಒದಗಿಸಬೇಕು. ಕನಿಷ್ಠ ವೇತನ 10 ಸಾವಿರ ನೀಡಲು ಈಚೆಗೆ ನಡೆದ ಸಮಾಜ ಕಲ್ಯಾಣ ಸಚಿವರೊಂದಿಗಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಮೇ 27ರಂದೇ ಸುತ್ತೋಲೆ ಹೊರಡಿಸಿದ್ದಾರೆ. ಸೂತ್ತೋಲೆಯಲ್ಲಿನ ಆದೇಶವನ್ನು ಜಾರಿಗೆ ತರಲು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಹಾಸ್ಟೆಲ್ ಅಡುಗೆಯವರಾಗಿ, ಸಹಾಯಕರಾಗಿ, ಜವಾನರಾಗಿ ಕೆಲಸ ಮಾಡುತ್ತಿರುವ ಮಾಹಿಳಾ ಕಾರ್ಮಿಕರಿಗೆ ಮತ್ತು ಇನ್ನಿತರೆ ಕಾರ್ಮಿಕರಿಗೆ ಅಲ್ಲಿಯ ವಾರ್ಡನ್ ಮತ್ತು ಸೂಪರಿಂಟೆಂಡೆಂಟ್ಗಳು ಸಂಬಳಕ್ಕಾಗಿ ಬೇಡಿಕೆಯಿಟ್ಟರೆ ಕೆಲಸದಿಂದ ವಜಾಗೊಳಿಸುವ ಬೆದರಿಕೆಯೊಡ್ಡುತ್ತಿದ್ದಾರೆಂದು ದೂರಿದರು.
ಕಿರುಕುಳ ತಡೆಗೆ ಆಗ್ರಹ: ಕೂಡಲೇ ಸಂಘದ ಎಲ್ಲ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗೆ ಸೂಚಿಸಬೇಕು. ನೌಕರರಿಗೆ ನೀಡುತ್ತಿರುವ ಅನಗತ್ಯ ಕಿರುಕುಳ ತಡೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಹೋರಾಟದಲ್ಲಿ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ, ಕರಿಯಪ್ಪ ಅಚ್ಚೊಳ್ಳಿ, ರಂಗನಾಥ ಕಲ್ಮಲಾ, ಗೌರಮ್ಮ, ಮೌಲಮ್ಮ, ಗುರುರಾಜ, ಶಿವರಾಜು ದೇವದುರ್ಗ, ರಾಮಣ್ಣ, ನಜೀರ್ ಅಹ್ಮದ್ ಸೇರಿ ಅನೇಕರಿದ್ದರು.