ರಾಯಚೂರು: ರಸ ಹೀರುವ ಕೀಟ, ಮೊಗ್ಗುದುರುವಿಕೆ, ಎಲೆ ಕೆಂಪಾಗುವಿಕೆಯಿಂದ ಹತ್ತಿಯ ಇಳುವರಿ ಕುಂಠಿತವಾಗುತ್ತಿದೆ. ಪ್ರತಿದಿನ ಬಿಡುಗಡೆಯಾಗುತ್ತಿರುವ ಹೊಸ ತಳಿಗಳ ಕೂಲಂಕಷ ಪರಿಚಯವಿಲ್ಲದೇ ರೈತರು ಬಳಸಬಾರದು ಎಂದು ರಾಯಚೂರು ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಬಿ.ಎಂ. ಚಿತ್ತಾಪೂರ್ ಸಲಹೆ ನೀಡಿದರು.
ನಗರದ ಕೃವಿವಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಬಿ.ಟಿ. ಹತ್ತಿ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ವಿವಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಡಾ.ಎ. ನಾಗನಗೌಡ ಮಾತನಾಡಿ, ಬಿ.ಟಿ. ಹತ್ತಿ ಬಂದ ನಂತರ ಹತ್ತಿ ಬೆಳೆಯುವುದು ಸುಲಭವಾಗಿದೆ. ಆದರೆ ರಸ ಹೀರುವ ಕೀಟಗಳು ಬೆಳೆ ಇಳುವರಿಯನ್ನು ಕುಂಠಿತಗೊಳಿಸುತ್ತಿವೆ ಎಂದು ನುಡಿದರು.
ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎಂ. ಸಿದ್ದಾರೆಡ್ಡಿ ಮಾತನಾಡಿ, ಹತ್ತಿ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಅನೇಕ ಏರಿಳಿತಗಳನ್ನು ಕಂಡಿದೆ. ಆದರೂ ಜಿಲ್ಲೆ ಹತ್ತಿಯ ಉತ್ಪಾದನೆಗೆ ಹೆಸರಾಗಿದ್ದು, ಯಾಂತ್ರೀಕರಣ ಈ ಬೆಳೆಯ ಪ್ರಮುಖ ಅವಶ್ಯಕತೆಯಾಗಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಸೋಮಶೇಖರ ಇದ್ದರು. ನಂತರ ನಡೆದ ತಾಂತ್ರಿಕ ಅಧಿವೇಶನದಲ್ಲಿ ಬಿಟಿ ಹತ್ತಿಯ ಪ್ರಮುಖ ಸಮಸ್ಯೆಗಳಾದ ಕೀಟ ಮತ್ತು ರೋಗ ನಿರ್ವಹಣೆ, ಪೋಷಕಾಂಶ ನಿರ್ವಹಣೆ, ಯಾಂತ್ರೀಕರಣ, ಹೊಸ ತಳಿಗಳ ಪರಿಚಯದ ಬಗ್ಗೆ ನುರಿತ ತಜ್ಞ ಡಾ. ಎಂ. ಭೀಮಣ್ಣ, ಡಾ. ಜಯಪ್ರಕಾಶ ನಿಡಗುಂದಿ, ಡಾ. ಸೋಮಶೇಖರ, ಡಾ. ವೈ.ಎಸ್. ಅಮರೇಶ, ಡಾ. ಅಜೇಯ ಕುಮಾರ, ಡಾ. ಸತ್ಯನಾರಾಯಣರಾವ್, ಡಾ. ಅನಂತಾಚಾರ್ಯ, ಡಾ. ಎಂ. ವೀರನಗೌಡ ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.