ಸಿಂಧನೂರು: ತಾಲೂಕಿನಲ್ಲಿ ವಿವಿಧ ಹಳ್ಳ ಮತ್ತು ನಾಲೆಗಳಿಂದ ಪ್ರತಿನಿತ್ಯ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿದ್ದು, ಈ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಲೋಕೋಪಯೋಗಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಬಿಎಸ್ಪಿ ಆರೋಪಿಸಿದೆ.
ನಗರದ ಪಕ್ಕದಲ್ಲಿರುವ ಹಿರೇಹಳ್ಳದ ಸೇತುವೆ ಬಳಿಯಲ್ಲಿಯೇ ಮರಳು ಅಗೆಯುತ್ತಿರುವುದರಿಂದ ಬೃಹತ್ ಸೇತುವೆ ಕುಸಿಯುವ ಅಪಾಯಕ್ಕೆ ಸಿಲುಕಿದೆ. ಅಕ್ರಮ ಮರಳು ದಂಧೆಯಿಂದ ಸರ್ಕಾರಕ್ಕೆ ಪ್ರತಿನಿತ್ಯ ್ಝ45 ಸಾವಿರ ಹಾನಿಯಾಗುತ್ತಿದೆ. ಕೆಲ ಟ್ರ್ಯಾಕ್ಟರ್ ಮಾಲೀಕರು 1600 ಡಿ.ಡಿ. ಪಾವತಿಸಿ ಹತ್ತಾರು ಟ್ರಿಪ್ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಭಾವಿ ಗುತ್ತಿಗೆದಾರರು ಹತ್ತಾರು ಟ್ರ್ಯಾಕ್ಟರ್ಗಳ ಮೂಲಕ ಎಗ್ಗಿಲ್ಲದೆ ಹಳ್ಳದ ಒಡಲನ್ನು ಬಗೆದು ಖಾಲಿ ಮಾಡುತ್ತಿದ್ದಾರೆ. ಇದನ್ನು ತಡೆಯಬೇಕಾದ ಅಧಿಕಾರಿಗಳು ಕೈಕಟ್ಟಿ ಕುಳಿತಿರುವುದು ಅನುಮಾನಾಸ್ಪದವಾಗಿ ಕಾಣುತ್ತಿದೆ. ತಕ್ಷಣ ತಹಸೀಲ್ದಾರರು ಮತ್ತು ಜಿಲ್ಲಾಧಿಕಾರಿಗಳು ಗಮನಹರಿಸಿ ಸಿಂಧನೂರು-ರಾಯಚೂರು ಮುಖ್ಯರಸ್ತೆಯ ಸೇತುವೆಯನ್ನು ರಕ್ಷಿಸುವಂತೆ ಬಿಎಸ್ಪಿ ತಾ. ಘಟಕದ ಅಧ್ಯಕ್ಷ ಹನುಮಂತಪ್ಪ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.