ರಾಯಚೂರು: ದೇಶದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯ ನಿಯಂತ್ರಣಕ್ಕೆ ದೇಶದಲ್ಲಿರುವ ಎಲ್ಲರ ಸಹಕಾರ ಅಗತ್ಯ ಎಂದು ತಹಸೀಲ್ದಾರ್ ಸಿದ್ಲಿಂಗಪ್ಪ ನಾಯಕ ಹೇಳಿದರು.ಮಾನವಿ ಪಟ್ಟಣದ ಕಲ್ಮಠ ಶಾಲೆಯಲ್ಲಿ ತಾಲೂಕು ಆರೋಗ್ಯ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಉತ್ತಮ ಕುಟುಂಬ, ಸುಖ ಜೀವನಕ್ಕಾಗಿ ಕುಟುಂಬದ ಸದಸ್ಯರ ಸಂಖ್ಯೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು. ತಾಲೂಕು ವೈದ್ಯಾಧಿಕಾರಿ ಡಾ. ಟಿ.ಶರಣಪ್ಪ, ಜನಸಂಖ್ಯೆ ಹೆಚ್ಚಳದಿಂದ ಆಗುವ ದುಷ್ಪರಿಣಾಮಗಳ ಕುರಿತು ವಿವರಿಸಿದರು. ಕಲ್ಮಠ ಶಾಲೆಯ ಪ್ರಾಚಾರ್ಯ ಎಸ್.ಎಸ್. ಪಾಟೀಲ್ ಮಾತನಾಡಿದರು. ಕಲ್ಮಠ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸಂಗಯ್ಯಸ್ವಾಮಿ, ಶಿಕ್ಷಣ ಇಲಾಖೆ ಅಧಿಕಾರಿ ಚನ್ನಬಸವರಾಜು ಇನ್ನಿತರರು ಇದ್ದರು.ಜಾಥಾ: ಇದಕ್ಕೂ ಮುನ್ನ ಮಾನವಿ ಪಟ್ಟಣದಲ್ಲಿ ಜನಸಂಖ್ಯೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಅಂಬೇಡ್ಕರ್ ವೃತ್ತದಿಂದ ಕಲ್ಮಠ ಶಾಲೆವರೆಗೆ ವಿದ್ಯಾರ್ಥಿಗಳು ಜಾಥಾ ನಡೆಸಿದರು.