ಲಿಂಗಸ್ಗೂರು: ತಾಲೂಕಿನ ಗೋನವಾಟ್ಲ ತಾಂಡಾ ರಸ್ತೆ ಮೂಲಕ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದ್ದ 8 ಟಿಪ್ಪರ್ಗಳನ್ನು ವಶಕ್ಕೆ ಪಡೆದ ಪೊಲೀಸರು 2.95 ಲಕ್ಷ ದಂಡ ವಿಧಿಸಿದ ಘಟನೆ ಭಾನುವಾರ ಸಂಜೆ ಜರುಗಿದೆ.
ದೇವದುರ್ಗ ತಾಲೂಕಿನ ಬುಂಕಲದೊಡ್ಡಿ ಹತ್ತಿರದ ಕೃಷ್ಣಾ ನದಿಯಲ್ಲಿನ ಮರಳನ್ನು ಸಾಗಿಸುತ್ತಿರುವ ಮಾಹಿತಿ ತಿಳಿದ ಸ್ಥಳೀಯ ಪೊಲೀಸ್ ಠಾಣೆ ಸಿಪಿಐ ವರದರಾಜ್ ನೇತೃತ್ವದ ಪೊಲೀಸರ ತಂಡ ತಾಲೂಕಿನ ಗೋನವಾಟ್ಲ ತಾಂಡಾ ರಸ್ತೆ ಮೂಲಕ ಸಾಗಿಸುತ್ತಿದ್ದ ವಾಹನಗಳ ಮೇಲೆ ಮಿಂಚಿನ ದಾಳಿ ನಡೆಸಿ 8 ಟಿಪ್ಪರ್ಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ 7 ಟಿಪ್ಪರ್ಗಳಿಗೆ ತಲಾ 35 ಸಾವಿರ ಹಾಗೂ ಅತಿ ಹೆಚ್ಚು ಭಾರ ಹೊಂದಿದ್ದ ಒಂದು ಟಿಪ್ಪರ್ಗೆ 50 ಸಾವಿರ ದಂಡ ಹಾಕಿದ್ದು, ವಾಹನಗಳ ಚಾಲಕರಿಗೆ ಹಣ ಪಾವತಿಸುವಂತೆ ನೋಟಿಸ್ ನೀಡಿದ್ದಾರೆ.
ಸರ್ಕಾರದ ಮಟ್ಟದಲ್ಲಿ ಪ್ರಭಾವ ಹೊಂದಿದ ಗುತ್ತಿಗೆದಾರರು ಮರಳು ಸಾಗಿರುತ್ತಿರುವ ಮಾಹಿತಿ ಅರಿತ ಸಿಪಿಐ ವರದರಾಜ್, ಟಿಪ್ಪರ್ಗಳ ಬಿಡುಗಡೆಗೊಳಿಸುವಂತೆ ಪ್ರಭಾವಿ ವ್ಯಕ್ತಿಗಳಿಂದ ಕರೆ ಬರಬಹುದೆಂಬ ಮುಂಜಾಗ್ರತೆ ವಹಿಸಿ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಜೊತೆಗೆ ಟಿಪ್ಪರ್ ಚಾಲಕರ ಮೊಬೈಲ್ಗಳನ್ನು ವಶಕ್ಕೆ ಪಡೆದು ಸ್ವಿಚ್ ಆಫ್ ಮಾಡಿದ್ದರು. ದಂಡ ರಶೀದಿ ಚಾಲಕರಿಗೆ ನೀಡಿದ ನಂತರ ಎಲ್ಲ ಮೊಬೈಲ್ಗಳನ್ನು ಸ್ವಿಚ್ ಆನ್ ಮಾಡಿ ಚಾಲಕರನ್ನು ಕಳುಹಿಸಿಕೊಡಲಾಯಿತು ಎನ್ನಲಾಗಿದೆ. ದಕ್ಷತೆಯಿಂದ ಕಾರ್ಯ ನಿರ್ವಹಿಸಿ ದಂಡ ವಿಧಿಸಿದ ಪ್ರಯುಕ್ತ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.