ಸಿಂಧನೂರು: ಗುಲ್ಬರ್ಗ ಹೈಕೋರ್ಟ್ ಪೀಠಕ್ಕೆ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಸೇರ್ಪಡೆ ಮಾಡುವುದು ಸೇರಿದಂತೆ ಹೈದ್ರಾಬಾದ್ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯ ಮತ್ತು ಕರ್ನಾಟಕ ಭೂ ನ್ಯಾಯ ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ಸ್ಥಳೀಯ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಭೀಮನಗೌಡ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು.
ನ್ಯಾಯಾಲಯದ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ಮುಖಾಂತರ ಬಂದು ತಹಸೀಲ್ದಾರ್ ಗಂಗಪ್ಪ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಹೈದ್ರಾಬಾದ್ ಕರ್ನಾಟಕ ಪ್ರದೇಶದ ಗುಲ್ಬರ್ಗ ಹೈಕೋರ್ಟ್ಗೆ ಐದು ಜಿಲ್ಲೆಗಳನ್ನು ಸೇರಿಸಿದ್ದು 23 ತಾಲೂಕುಗಳನ್ನು ಒಳಗೊಂಡಿದೆ. ಆದರೆ ಧಾರವಾಡ ಹೈಕೋರ್ಟ್ ಪೀಠ 8 ಜಿಲ್ಲೆಯ 63 ತಾಲೂಕುಗಳನ್ನು ಒಳಗೊಂಡಿದೆ. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳು ಹೈ-ಕ ವಿಶೇಷ ಸ್ಥಾನಮಾನಗಳನ್ನು ಪಡೆದುಕೊಂಡಿದ್ದು ಇವುಗಳನ್ನು ಗುಲ್ಬರ್ಗ ಹೈಕೋರ್ಟ್ ಪೀಠಕ್ಕೆ ಸೇರ್ಪಡೆ ಮಾಡಬೇಕೆಂದು ವಕೀಲರಾದ ಹನುಮಂತಪ್ಪ ಗುಡಿ, ಅಬ್ದುಲ್ಗನಿಸಾಬ, ಜಿಎಸ್ಆರ್ಕೆ ರೆಡ್ಡಿ, ಕೆ.ಅಮರೇಗೌಡ ಮತ್ತಿತರರು ಒತ್ತಾಯಿಸಿದರು.
ಗೌರವಧನ ಕೊಡಿ: ಕಿರಿಯ ವಕೀಲರಿಗೆ ಸರ್ಕಾರ ನೀಡುತ್ತಿರುವ ಗೌರವಧನವನ್ನು ಕೆಲವರಿಗೆ ಇನ್ನೂ ಕೊಟ್ಟಿಲ್ಲ. ತಕ್ಷಣ ಜಿಲ್ಲಾಧಿಕಾರಿಗಳು ಗೌರವಧನ ಬಿಡುಗಡೆ ಮಾಡುವಂತೆ ಆಗ್ರಹಿಸಲಾಯಿತು. ಸಿಂಧನೂರಿನಲ್ಲಿ ಹಿರಿಯ ಶ್ರೇಣಿ ನ್ಯಾಯಾಲಯದ ಕಾಯಂ ಪೀಠ ಸ್ಥಾಪಿಸುವಂತೆ 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಈವರೆಗೆ ಸರ್ಕಾರ ತಮ್ಮ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಣಕಾಸು ಖಾತೆಯನ್ನು ಹೊಂದಿರುವ ಸಿಎಂ ಶೀಘ್ರವೇ ಹಣಕಾಸಿನ ಒಪ್ಪಿಗೆ ನೀಡುವ ಮೂಲಕ ಬಹುದಿನದ ಬೇಡಿಕೆ ಈಡೇರಿಸುವಂತೆ ವಕೀಲರ ಸಂಘದ ಮುಖಂಡರು ಮನವಿ ಮಾಡಿದರು. ವಕೀಲರಾದ ಡಿ.ಎಸ್. ಕಲ್ಮಠ, ಕೆ.ವೀರನಗೌಡ, ರಾಯಪ್ಪ, ಖಾಜಿ ಮಲಿಕ್, ಎಚ್.ವೀರಭದ್ರಪ್ಪ, ಬಸನಗೌಡ ಮತ್ತಿತರರು ಭಾಗವಹಿಸಿದ್ದರು.