ರಾಯಚೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ಹೆಚ್ಚುತ್ತಿರುವುದನ್ನು ಖಂಡಿಸಿ ಅತ್ಯಾಚಾರಿಗಳನ್ನು ಗುಂಡಿಟ್ಟು ಕೊಲ್ಲುವಂತೆ ಆಗ್ರಹಿಸಿ ಹಾಗೂ ಗೋವಾದಲ್ಲಿ ಕನ್ನಡಿಗರ ಮೇಲಾಗುತ್ತಿರುವ ದೌರ್ಜನ್ಯ ಖಂಡಿಸಿ ನಗರದಲ್ಲಿ ಶುಕ್ರವಾರ ಕರವೇ ಕಾರ್ಯಕರ್ತರು ಬೆಳದಿಂಗಳು ಮಹಿಳಾ ಒಕ್ಕೂಟದ ಬೆಂಬಲದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಅತ್ಯಾಚಾರಿಗಳ ಪ್ರತಿಕೃತಿಗೆ ಪೊರಕೆ ಪೂಜೆ ಮತ್ತು ಭೂತ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರಮುಖ ಮಾರ್ಗದ ಮೂಲಕ ಮೆರವಣಿಗೆ ನಡೆಸಿದ ಕರವೇ ಕಾರ್ಯಕರ್ತರು, ತೀನ್ ಕಂದೀಲ್ನಲ್ಲಿ ಅತ್ಯಾಚಾರಿಗಳ ಪ್ರತಿಕೃತಿಗೆ ಮಹಿಳೆಯರಿಂದ ಪೊರಕೆ ಪೂಜೆ ನಡೆಸಿ ಭೂತದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂದ ಹಿಂಸಾಚಾರ, ದೌರ್ಜನ್ಯ, ದಬ್ಬಾಳಿಕೆಯ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಅದರಲ್ಲೂ ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ ತಡೆಯುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಈಚೆಗೆ ನಡೆದಿರುವ ಅತ್ಯಾಚಾರದ ಪ್ರಕರಣಗಳೇ ಸಾಕ್ಷಿಯಾಗಿವೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸುವಲ್ಲಿ ಕಾನೂನು ಪಾಲನೆಯಾಗುತ್ತಿಲ್ಲ. ಅತ್ಯಾಚಾರಿಗಳನ್ನು ಗುಂಡಿಟ್ಟುಕೊಲ್ಲುವವರೆಗೆ ಇಂಥ ಪ್ರಕರಣಗಳು ನಿಲ್ಲುವ ಲಕ್ಷಣವಿಲ್ಲ ಎಂದು ಆಗ್ರಹಿಸಿದರು.
ಗೋವಾ ಕನ್ನಡಿಗರು: ಗೋವಾದಲ್ಲಿ ಅಲ್ಲಿನ ಸರ್ಕಾರ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಿದೆ. ಕನ್ನಡಿಗರು ವಾಸವಾಗಿದ್ದ ಗುಡಿಸಲು, ಮನೆಗಳನ್ನು ತೆರವುಗೊಳಿಸುವ ಮೂಲಕ ಕನ್ನಡಿಗರು ಗೋವಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊರನಾಡ ಕನ್ನಡಿಗರಿಕೆ ಸೂಕ್ತ ರಕ್ಷಣೆ ಕಲ್ಪಿಸುವಂತೆ ರಾಜ್ಯ ಸರ್ಕಾರ ಕೂಡಲೇ ಗೋವಾ ಸರ್ಕಾರಕ್ಕೆ ತಾಕೀತು ಮಾಡಬೇಕೆಂದು ಒತ್ತಾಯಿಸಿದರು.
ವಿಫಲ: ಗೃಹ ಸಚಿವ ಕೆ.ಜೆ. ಜಾರ್ಜ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಿಸುವಲ್ಲಿ ಎಡವಿದ್ದಾರೆ. ಅದರಿಂದಾಗಿಯೇ ರಾಜ್ಯದಲ್ಲಿ ದಬ್ಬಾಳಿಕೆ, ಹಿಂಸಾಚಾರ, ಮಹಿಳಾ ದೌರ್ಜನ್ಯ ಮತ್ತು ಅತ್ಯಾಚಾರದಂಥ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ.
ಕಾರಣ ಕೂಡಲೇ ಗೃಹ ಸಚಿವ ಜಾರ್ಜ್ ರಾಜಿನಾಮೆ ಪಡೆಯುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಈ ಸಂದರ್ಭ ಕರವೇ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಜೈನ್ ಮತ್ತು ಬೆಳದಿಂಗಳು ಮಹಿಳಾ ಒಕ್ಕೂಟದ ಅನಂತಮ್ಮ ನೇತೃತ್ವ ವಹಿಸಿದ್ದರು. ಕರವೇ ಸಂಘಟನೆಯ ಖಲೀಲ್ ಪಾಷಾ, ಮೊಹಿನ್ ಖಾನ್, ರಾಜಶೇಖರ ಕಾಜಗಾರ್, ಮಾನಸಿಂಗ್ ಠಾಕೂರ್, ಕಿಶನ್ ರಾವ್, ರಘುವೀರ ನಾಯಕ, ಮಲ್ಲಿಕಾರ್ಜುನ ಸೇರಿದಂತೆ ಅನೇಕರಿದ್ದರು.