ಸಿಂಧನೂರು: ಪಟ್ಟಣದಲ್ಲಿ ಮನುಜಮತ ಬಳಗ ವತಿಯಿಂದ ಜು.24ರಂದು ವಿಚಾರವಾದಿ ಹುಲಿಕಲ್ ನಟರಾಜ್ ಅವರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಗೌರವಾಧ್ಯಕ್ಷ ವೈ. ನರೇಂದ್ರನಾಥ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾಲಿ ಮುಳ್ಳಿನ ಮೇಲೆ ನೃತ್ಯ, ಕುದಿಯುವ ಎಣ್ಣೆಯಲ್ಲಿ ಕೈ ಅದ್ದುವುದು, ಅಸ್ಲಂ ಬಾಬಾ ಸರ್ಜರಿ, ಬರಿಗೈಯಲ್ಲಿ ಕತ್ತು ಕೊಯ್ಯುವುದು, ಶೂನ್ಯದಿಂದ ವಸ್ತುಗಳ ಸೃಷ್ಟಿ, ತಲೆಯ ಮೇಲೆ ಬೆಂಕಿ ಉರಿಸುವುದು, ಗಾಜು ತಿನ್ನುವುದು ಸೇರಿದಂತೆ ಮುಂತಾದ ಪವಾಡಗಳನ್ನು ಬಯಲು ಮಾಡುವ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು. ಬಳಗದ ಅಧ್ಯಕ್ಷ ಡಿ.ಎಚ್. ಕಂಬಳಿ ಮಾತನಾಡಿ, ಕಾರ್ಯಕ್ರಮದ ಉದ್ಘಾಟನೆಯನ್ನು ತಹಸೀಲ್ದಾರ್ ಎಂ. ಗಂಗಪ್ಪ ನೆರವೇರಿಸುವರು. ಹುಲಿಕಲ್ ನಟರಾಜ ಬರೆದ ನೀನೆ ಜೀನಿಯಸ್ ಕೃತಿಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ದೇವೇಂದ್ರಪ್ಪನವರು ಬಿಡುಗಡೆಗೊಳಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಿ.ವೈ.ಎಸ್.ಪಿ. ಸೂರ್ಯವಂಶಿ, ಬಿಇಒ ವಿರೂಪಾಕ್ಷಪ್ಪ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.