ಮುದಗಲ್: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಆರು ದಶಕಗಳು ಕಳೆದರೂ ಗ್ರಾಮೀಣ ಪ್ರದೇಶಗಳು ಇನ್ನೂ ಅಭಿವೃದ್ಧಿಯಾಗಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಸಮೀಪದ ರಾಮತ್ನಾಳ ಗ್ರಾಮವೇ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದ ಕೊನೆಯ ಹಳ್ಳಿ ಇದಾಗಿದ್ದು, ಈ ಗ್ರಾಮದಲ್ಲಿ ಸಮಸ್ಯೆಗಳ ಸರಮಾಲೆಗಳೇ ಇವೆ. ಪಕ್ಕದಲ್ಲೇ ಹಿರೇಹಳ್ಳ ಹರಿಯುತ್ತಿದ್ದರೂ ಗ್ರಾಮದ ಜನರು ಉಪ್ಪು ನೀರು ಸೇವಿಸುವುದು ತಪ್ಪಿಲ್ಲ. ಹರಿಜನ, ಗಿರಿಜನರು ವಾಸಿಸುವ ಗಲ್ಲಿಗಳಲ್ಲಿ ಮೂಲ ಸೌಲಭ್ಯಗಳಾದ ರಸ್ತೆ, ಸ್ವಚ್ಛತೆ ಇಲ್ಲ, ಕಡು ಬಡವರಿಗೆ ಆಶ್ರಯ ಮನೆಗಳೇ ಸಿಕ್ಕಿಲ್ಲ.
ಗ್ರಾಮದ ರಸ್ತೆಗಳೇ ಚರಂಡಿಗಳಾಗಿವೆ. ಬಚ್ಚಲ ನೀರು, ಮಳೆ ನೀರು ರಸ್ತೆಗಳಲ್ಲಿ ಹರಿಯುತ್ತಿದ್ದರಿಂದ ರಸ್ತೆಗಳೆಲ್ಲ ಕೆಸರು ಗದ್ದೆಗಳಾಗಿವೆ. ಈ ಗ್ರಾಮ ಹೂನೂರು ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿದ್ದು, ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಸಮರ್ಪಕವಾಗಿ ಗ್ರಾಮೀಣ ಜನರಿಗೆ ತಲುಪುವುದಿಲ್ಲ ಎನ್ನುವುದಕ್ಕೆ ಇಲ್ಲಿನ ಜನರೇ ಸಾಕ್ಷಿಯಾಗಿದ್ದಾರೆ.
ಕುಡಿವ ನೀರು: ಗ್ರಾಮಕ್ಕೆ ಪಕ್ಕದ ಹಿರೇಹಳ್ಳದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಹಳ್ಳದ ನೀರು ಉಪ್ಪಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಉಪ್ಪು ನೀರು ಕುಡಿಯುತ್ತಿದ್ದರಿಂದ ಗ್ರಾಮದ ವಯೋವೃದ್ಧರು ಮೊಳಕಾಲು, ಸೊಂಟ ನೋವಿನಿಂದ ಬಳಲುತ್ತಿದ್ದರೆ, ವಯಸ್ಕರು, ಮಕ್ಕಳ ಹಲ್ಲುಗಳು ಕಂದು ಬಣ್ಣಕ್ಕೆ ತಿರುಗಿವೆ. ಯೋಗ್ಯವಲ್ಲದ ನೀರು ಸೇವಿಸದೆ ಗತ್ಯಂತರವಿಲ್ಲ, ಸರ್ಕಾರ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಇಂತಹ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವುದು ಅಗತ್ಯವಾಗಿದೆ. ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ನನೆಗುದಿಗೆ ಬಿದ್ದಿದ್ದು ನೀರು ಸಂಗ್ರಹ ತೊಟ್ಟಿ ನಿರ್ಮಾಣವಾಗಿ ವರ್ಷಗಳೇ ಕಳೆದಿವೆ. ಇದುವರಿಗೂ ಪೈಪ್ಲೈನ್ ಅಳವಡಿಸಿಲ್ಲ ಎಂದು ಗ್ರಾಮಸ್ಥ ಬಸವರಾಜ ತಿಳಿಸಿದರು.
ರಸ್ತೆಗಳು: ಮುದಗಲ್ ಪಟ್ಟಣದಿಂದ 21 ಕಿ.ಮೀ. ದೂರದಲ್ಲಿರುವ ಈ ಗ್ರಾಮದ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದು, ದಶಕದಿಂದಲೂ ದುರಸ್ತಿ ಭಾಗ್ಯ ಕಂಡಿರಲಿಲ್ಲ. ಹದಗೆಟ್ಟ ರಸ್ತೆಯಲ್ಲಿ ಸಾರಿಗೆ ಬಸ್ಗಳು ಸಮಯಕ್ಕೆ ಸರಿಯಾಗಿ ಬರದೆ ಶಾಲಾ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ಗ್ರಾಮದಲ್ಲಿರುವ ಮುಖ್ಯ ರಸ್ತೆಗಳು ದುರಸ್ತಿ ಕಾಣದೆ ಮಳೆ ನೀರು ನಿಂತು ಕೆಸರು ಗದ್ದೆಗಳಾಗಿವೆ. ಗ್ರಾ.ಪಂ.ಯಿಂದ ಗ್ರಾಮಗಳಲ್ಲಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಿಲ್ಲ. ರಸ್ತೆಗಳೇ ಚರಂಡಿಗಳಾಗಿ ಮಾರ್ಪಟ್ಟಿವೆ.
ಸಾರಿಗೆ: ಗ್ರಾಮದ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮುದಗಲ್, ಇಲಕಲ್ಲಗಳಿಗೆ ಹೋಗಬೇಕು. ಹದಗೆಟ್ಟ ರಸ್ತೆಯಿಂದಾಗಿ ಸಮಯಕ್ಕೆ ಸರಿಯಾಗಿ ಬಸ್ಗಳು ಬಾರದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಶಾಲಾ- ಕಾಲೇಜು ಸಮಯಕ್ಕೆ ಇಲಕಲ್ಲ ಡಿಪೋದಿಂದ ಬಸ್ ಸೌಲಭ್ಯ ದೊರೆಯುವಂತೆ ಮಾಡಬೇಕಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಗೋಳನ್ನು ತೋಡಿಕೊಂಡರು.