ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.24
ಅಮೆರಿಕದ ಇಂಡಿಯಾ ಹೆರಿಟೇಜ್ ಸಂಸ್ಥೆ ಹೊರತಂದಿರುವ ಹಿಂದು ಧರ್ಮದ ಎನ್ಸೈಕ್ಲೋಪೀಡಿಯಾದಿಂದ ಪ್ರಭಾವಿತರಾಗಿರುವ ಗುಲ್ಬರ್ಗದ ಶರಣಬಸವೇಶ್ವರ ದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ, ವೀರಶೈವ ಧರ್ಮ, ಸಂಸ್ಕೃತಿ, ತತ್ವ, ಸಿದ್ಧಾಂತ ಹಾಗೂ ಸಾಹಿತ್ಯದ ಸಂಗತಿಗಳನ್ನೊಳಗೊಂಡ ಸಮಗ್ರ ವೀರಶೈವ ಧರ್ಮದ ಎನ್ಸೈಕ್ಲೋಛಪೀಡಿಯಾ ಹೊರತರುವ ಯೋಜನೆ ಕೈಗೆತ್ತಿಕೊಂಡಿದ್ದಾರೆ.
ಈ ವಿನೂತನ ಯೋಜನೆಗೆ ಡಾ. ಶರಣಬಸವಪ್ಪ ಅಪ್ಪ ಅವರೇ ಸಾರಥಿ. ತಮ್ಮ ಈ ಹೊಸ ಚಿಂತನೆಗೆ ಅವರು ನಾಡಿನ ಸಂಶೋಧಕರು, ಧರ್ಮದ ವಿಚಾರಗಳಲ್ಲಿ ಸಂಶೋಧನೆ ಮಾಡಿದ ಪಂಡಿತರು, ಪರಿಣಿತರು, ವಿದ್ವಾಂಸರಿರುವ ಪರಿಪೂರ್ಣ ಸಂಪಾದಕೀಯ ಮಂಡಳಿ ರಚಿಸಿಕೊಂಡು 'ವೀರಶೈವ ಎನ್ಸೈಕ್ಲೋಪೀಡಿಯಾ' ಸೃಷ್ಟಿಯ ಲೋಕಕ್ಕೆ ಹೆಜ್ಜೆ ಇಡಲಿದ್ದಾರೆ.
ದಾಸೋಹ ಮಹಾಮನೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಸಂಗತಿ ಪ್ರಕಟಿಸಿರುವ ಡಾ. ಅಪ್ಪ, ಅಮೆರಿಕದ ಕೆರೆಲಿನಾದಲ್ಲಿರುವ ಭಾರತೀಯ ಸಂಸ್ಕೃತಿ, ತತ್ವ-ಸಿದ್ಧಾಂತಗಳ ಮೇಲೆ ಕೆಲಸ ಮಾಡುತ್ತಿರುವ, ಭಾರತ ಮೂಲದ ಸ್ವಾಮೀಜಿ ಕೃಷ್ಣಾನಂದ ಸರಸ್ವತಿ ನೇತೃತ್ವದ ಸಂಸ್ಥೆ ಹೊರತಂದಿರುವ ಹಿಂದು ಧರ್ಮದ ಕುರಿತಾದಂತಹ 11 ಸಂಪುಟಗಳಿರುವ ಎನ್ಸೈಕ್ಲೋಪೀಡಿಯಾ ತುಂಬ ವಿಷಯಗಳನ್ನು ಒಳಗೊಂಡಿದೆ. ಇದೇ ಮಾದರಿಯಲ್ಲಿ ವೀರಶೈವ ಧರ್ಮ, ಸಿದ್ಧಾಂತ, ತತ್ವಗಳು ಸೇರಿದಂತೆ ಅನೇಕ ವಿಚಾರಗಳಿರುವ ವಿಶ್ವಕೋಶ ರಚನೆಯೇ ತಮ್ಮ ಈ ಯೋಜನೆ ಹಿಂದಿನ ಗುರಿ ಎಂದರು.
ಸ್ಥಳೀಯ ಪ್ರತಿಭೆಗಳ ಬಳಕೆ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿರುವ, ಕನ್ನಡ ಪಂಡಿತರು, ಸಾಹಿತಿಗಳೂ ಆಗಿರುವ ಡಾ. ಶಿವರಾಜ ಶಾಸ್ತ್ರೀ ಹೆರೂರ್, ಡಾ. ನೀಲಮ್ಮ ಪತಂಗೆ, ಡಾ. ಡೊಳ್ಳೆಗೌಡರ ಸೇರಿದಂತೆ ಅನೇಕರು ಈ ಯೋಜನೆಯಲ್ಲಿ ಕ್ರಿಯಾಶೀಲರಾಗಲಿದ್ದಾರೆ. ಸಂಸ್ಥಾನದಲ್ಲೇ ಅನೇಕ ಇಂಗ್ಲಿಷ್ ಭಾಷೆಯ ಪ್ರಭುತ್ವ ಹೊಂದಿದವರು ಇದ್ದಾರೆ. ವೀರಶೈವ ಧರ್ಮದ ಕನ್ನಡ ವಿಶ್ವಕೋಶ ಸಿದ್ಧಗೊಳ್ಳುತ್ತಿದ್ದಂತೆಯೇ ಅದನ್ನು ಆಂಗ್ಲ ಭಾಷೆಗೂ ತರ್ಜುಮೆ ಮಾಡುವ ಕೆಲಸ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ಹಿಂದು ಧರ್ಮದ ವಿಶ್ವಕೋಶ ಸಿದ್ಧಪಡಿಸುವ ಯೋಜನೆ ಅಮೆರಿಕದ ಭಾರತೀಯ ಸಂಸ್ಥೆಯವರು 1983ರಲ್ಲೇ ಆರಂಭಿಸಿದರೂ ಸಹ ಅದು ಪೂರ್ಣಗೊಂಡು 11 ಆವೃತ್ತಿಗಳಲ್ಲಿ ಅಚ್ಚುಗೊಳ್ಳಲು 20 ವರ್ಷ ತಗುಲಿದೆ. ವೀರಶೈವ ಧರ್ಮದ ವಿಶ್ವಕೋಶಕ್ಕೆ ಇಂತಿಷ್ಟೇ ಸಂಪುಟ ಎಂದು ಸಂಖ್ಯೆ ನಿಗದಿ ಮಾಡಿಲ್ಲ. ಯೋಜನೆ ಪೂರ್ಣಗೊಳ್ಳಲು ಅವಧಿಯೂ ನಿಗದಿ ಮಾಡಿಲ್ಲ. ಯೋಜನೆ ಪರಿಪೂರ್ಣವಾಗಿ ಹೊರಹೊಮ್ಮಬೇಕು, ಸಂಶೋಧನೆ ಪಕ್ಕಾ ಆಗಿ ವಿಷಯ ಸಂಪುಟಗಳಲ್ಲಿ ಅಡಕವಾಗಿರಬೇಕು ಎಂಬುದೇ ತಮ್ಮ ಆಶಯ ಎಂದು ಡಾ. ಅಪ್ಪ ಹೇಳಿದರು.
ಉಪನ್ಯಾಸ ಮಾಲಿಕೆ ಯೋಜನೆಗೆ ಪೂರಕ: ಈ ಬಾರಿಯ ದಾಸೋಹ ಮಹಾಮನೆಯಲ್ಲಿ ಆಯೋಜಿಸಿರುವ ತಮ್ಮ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಕಾರ್ಯಕ್ರಮಗಳನ್ನೂ ವೀರಶೈವ ಧರ್ಮದ ಕುರಿತಾಗಿಯೇ ವಿಷಯಗಳನ್ನು ಕೇಂದ್ರೀಕರಿಸಲಾಗಿದೆ. ಈ ಉಪನ್ಯಾಸ ಮಾಲಿಕೆಯ ವಿಚಾರಗಳೂ ಸಹ ಹೊಸ ಯೋಜನೆಗೆ ಪೂರಕವಾಗಿಯೇ ಹೊರಹೊಮ್ಮಬೇಕು ಎಂಬುದೇ ಡಾ. ಶರಣಬಸವಪ್ಪ ಅಪ್ಪ ಅವರ ಇರಾದೆ ಆಗಿದೆ ಎಂದು ಉಪನ್ಯಾಸ ಮಾಲಿಕೆ ಸಂಚಾಲಕ ಡಾ. ಶಿವರಾಜ ಸಾಸ್ತ್ರೀ ಹೆರೂರ್ ಹೇಳಿದರು.
ಸಂಶೋಧಕರು, ಚಿಂತಕರಿಗೆ ಪತ್ರ
ಶತಾಯುಷಿ ಡಾ. ಸಿದ್ದಗಂಗಾ ಶ್ರೀಗಳು, ಸಂಶೋಧಕರಾದ ಡಾ. ಚಿದಾನಂದಮೂರ್ತಿ, ಡಾ. ವಿದ್ಯಾಶಂಕರ, ಡಾ. ಎಸ್.ಎಸ್. ಶೆಟ್ಟರ್, ಬೆಂಗಳೂರು ಬೇಲಿಮಠ ಸ್ವಾಮೀಜಿ, ಸುತ್ತೂರು ಶ್ರೀಗಳು ಸೇರಿದಂತೆ ನಾಡಿನ ವಿದ್ವಾಂಸರು, ಸ್ವಾಮೀಜಿಗಳಿಗೆ ಈ ವಿಚಾರವಾಗಿ ಪತ್ರ ಬರೆದು ಸಂಪಾದಕೀಯ ಮಂಡಳಿಯಲ್ಲಿ ಇರುವಂತೆ ಕೋರಲಾಗಿದೆ.
ಈಗಾಗಲೇ ವಿದ್ಯಾಶಂಕರ್, ಡಾ. ಚಿದಾನಂದಮೂರ್ತಿ ಹಾಗೂ ಡಾ. ಶೆಟ್ಟರ್ ಅವರಿಂದ ಒಪ್ಪಿಗೆಯೂ ಬಂದಿದೆ. ಇನ್ನುಳಿದಂತೆ ಇನ್ನೂ ಅನೇಕರನ್ನು ಈ ದಿಶೆಯಲ್ಲಿ ಸಂಪರ್ಕಿಸುವ ಕೆಲಸ ಸಾಗಿದೆ. ಇದಲ್ಲದೆ ಸ್ಥಳೀಯವಾಗಿ, ಹೈ-ಕ ಭಾಗದಲ್ಲಿರುವ, ಉತ್ತರ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯದ ಜೊತೆಗೆ ಧರ್ಮದ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಸಂಶೋಧನೆಗಳ ಮಾಡಿ ಪ್ರಬಂಧಗಳನ್ನು ಬರೆದಿರುವ ವಿದ್ವಾಂಸರನ್ನು ಗುರುತಿಸಿ ಅವರಿಗೂ ಯೋಜನೆಯೊಂದಿಗೆ ಕೈಜೋಡಿಸುವಂತೆ ಕೋರಲಾಗುತ್ತದೆ ಎಂದರು.