ಮಸ್ಕಿ: ಇಲ್ಲಿನ ಜಲಸಂಪನ್ಮೂಲ ಇಲಾಖೆ ಕಚೇರಿ ಎದುರು ಕಳೆದ ಕೆಲ ದಿನಗಳಿಂದ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ 55ನೇ ಉಪಕಾಲುವೆಯ ಮೇಲ್ಭಾಗದ ರೈತರು ನಡೆಸುತ್ತಿದ್ದ ಧರಣಿ ಶುಕ್ರವಾರ ನೀರಾವರಿ ಇಲಾಖೆಯ ಅಧಿಕಾರಿಗಳು ಭರವಸೆ ನೀಡುವುದರೊಂದಿಗೆ ಅಂತ್ಯಕಂಡಿದೆ.
ಧರಣಿ ಸ್ಥಳಕ್ಕೆ ಯರಮರಸ್ ವೃತ್ತದ ಅಧೀಕ್ಷಕ ಅಭಿಯಂತರ ಶಿವುಕುಮಾರ ಶುಕ್ರವಾರ ಭೇಟಿ ನೀಡಿ ರೈತರೊಂದಿಗೆ ಸಭೆ ನಡೆಸಿದರು. ಈ ವೇಳೆ ರೈತರು ಮಾತನಾಡಿ, 55ನೇ ಉಪ ಕಾಲುವೆ ಮೇಲ್ಭಾಗದ ರೈತರ ಮೇಲೆ ಜಲ ಸಂಪನ್ಮೂಲ ಇಲಾಖೆ ಎಂಜಿನಿಯರ್ಗಳು ಅಕ್ರಮ, ಸಕ್ರಮ ಹೆಸರಿನಲ್ಲಿ ಉಪ ಕಾಲುವೆ ಸೊನ್ನೆಯಿಂದ 16ನೇ ಮೈಲ್ ವರೆಗೆ ತೆರವು ಕಾರ್ಯಾಚರಣೆ ನಡೆಸಿ ಮೇಲ್ಭಾಗದ ರೈತರ ಮೇಲೆ ಗದಾಪ್ರಹಾರ ಮಾಡಿದ್ದೀರಿ. ಆದರೆ 16ನೇ ಮೈಲ್ ನಿಂದ 31ನೇ ಮೈಲ್ ವರೆಗೆ ಕಾರ್ಯಾಚರಣೆ ನಡೆಸಿಲ್ಲ ಎಂದು ಟೀಕಿಸಿದರು.
ಪೈಪ್ ತೆರವಿಗೆ ವಿರೋಧವಿಲ್ಲ: ಅಕ್ರಮ ಪಂಪ್ ಸೆಟ್, ಪೈಪ್ಗಳ ತೆರವು ಕಾರ್ಯಾಚರಣೆಗೆ ತಮ್ಮ ವಿರೋಧವಿಲ್ಲ ಎಂದ ರೈತರು, ಕಾರ್ಯಾಚರಣೆಯನ್ನು 31ನೇ ಮೈಲ್ ನಿಂದ ಪ್ರಾರಂಭಿಸುವಂತೆ ತಾಕೀತು ಮಾಡಿದರು. ಕಾಲುವೆಯಿಂದ ಬಸಿಯುವ ನೀರು, ನಾಲೆ, ಕೊಳವೆ ಬಾವಿ ಮೂಲಕ ನೀರು ಪಡೆಯಲು ಅನುಮತಿ ನೀಡಬೇಕು. ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಬೇಕು. ಪಂಪ್ ಸೆಟ್ಗಳಿಗೆ ಪರವಾನಗಿ ನೀಡಬೇಕು. ತೆರವುಗೊಳಿಸಿದ ಪಂಪ್ಸೆಟ್ಗಳ ಮರು ಜೋಡನೆಗೆ ಅವಕಾಶ ನೀಡಬೇಕು ಎಂದು ರೈತರು ಒತ್ತಾಯಿಸಿದರು.
ಶಿವುಕುಮಾರ, ಇಇ ಹನುಮಂತಪ್ಪ ಧರಣಿ ಸ್ಥಳಕ್ಕೆ ಭೇಟಿ ನೀಡಿ, ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗುವುದು. ಪಂಪ್ ಸೆಟ್ಗಳ ಮರು ಜೋಡಣೆಗೆ, ನಾಲಾ ಪರವಾನಗಿ ನೀಡಲು ಮೇಲಧಿಕಾರಿಗಳ ಜತೆ ಸಮಾಲೋಚಿಸಿ ಮುಂದಿನ 4 ದಿನಗಳೊಳಗೆ ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದ್ದರಿಂದ ಧರಣಿಯನ್ನು ರೈತರು ಹಿಂಪಡೆದರು.
ಸಭೆಯಲ್ಲಿ ದೊಡ್ಡಪ್ಪ ಮಸ್ಕಿ, ಬಸನಗೌಡ ಮುದಬಾಳ, ಶೇಖರಪ್ಪ ಮೇಟಿ, ದಯಾನಂದ ರೆಡ್ಡಿ, ಶಂಕರರಾವ್ ಕುಲಕರ್ಣಿ, ವೆಂಕಣ್ಣ, ಬಸವರಾಜ ಕಮತರ್, ನೀಲಕಂಠಪ್ಪ ನಾಯಕ, ಶರಣಪ್ಪ ಅಂಗಡಿ, ಶೇಖರಪ್ಪ ಬಾವಿಕಟ್ಟಿ, ನಾಗೇಶ ಖಡಾಮುಡಿ ಮಠ, ಅಮರೇಗೌಡ, ನಾಗೇಶ ಸ್ವಾಮಿ ಹಾಗೂ ಸಿಂಧನೂರು ಇಇ ಹನುಮಂತಪ್ಪ, ಎಇಇ ಗೋವರ್ದನ ಅನೇಕರಿದ್ದರು.