ಕ.ಪ್ರ. ವಾರ್ತೆ ರಾಯಚೂರು ಜು. 27
ಸಮಾಜದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಸಾಧನೆಗೆ ದಾರಿದೀಪವಾಗುತ್ತದೆ. ಹಾಗಾಗಿ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮೊದಲು ಮಾಡುವಂತೆ ಮಧ್ವಮಠ ಪ್ರಯಾಗದ ಶ್ರೀ ವಿದ್ಯಾತ್ಮತೀರ್ಥರು ಕರೆ ನೀಡಿದರು.
ನಗರದ ರಂಗಮಂದಿರದಲ್ಲಿ ಭಾನುವಾರ ಸಂಜೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ವಿಪ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಕಲ್ಪನೆ ಬಿತ್ತಿ ಬೆಳೆಸಿ ಪ್ರೋತ್ಸಾಹಿಸಿದಾಗ ಮಾತ್ರ ವ್ಯಕ್ತಿ ಯಾವುದೇ ಕಷ್ಟದ ಗುರಿಯನ್ನು ಸರಳವಾಗಿ ತಲುಪಲು ಸಾಧ್ಯವಾಗುತ್ತದೆ ಎಂದರು.
ಅಪಾಯಕಾರಿ...: ಪ್ರತಿಭೆಗಳಿಗೆ ಮೊಳಕೆಯಲ್ಲಿಯೇ ನೀರೆರೆದು ಪೋಷಿಸಬೇಕು. ಆ ಮೂಲಕ ಬೆನ್ತಟ್ಟಿ ಸಾಧನೆಗೆ ಮಾರ್ಗದರ್ಶನ ಮಾಡಬೇಕು. ಯೋಜನಾ ಬದ್ಧ ಅಧ್ಯಯನದಿಂದ ಬದುಕಿನಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯ ಎಂದ ಅವರು, ಬ್ರಾಹ್ಮಣ್ಯವನ್ನು ಕಳೆದುಕೊಂಡು ಎಲ್ಲರೂ ಹಣದ ಹಿಂದೆ ಓಡುವ ಗುಣ ರೂಢಿಸಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸ್ವಸಾಮರ್ಥ್ಯ ಅರಿತು ಗುರಿಯತ್ತ ಸಾಗಿದಾಗ ಮಾತ್ರ ಸಾಧನೆ ಮೆರೆಯಲು ಸಾಧ್ಯವಾಗುತ್ತದೆ. ಬ್ರಾಹ್ಮಣರು ಬೌದ್ಧಿಕವಾಗಿ ಪ್ರಗತಿ ಹೊಂದಿ ಶ್ರೀಮಂತಿಕೆಗೆ ಹಾತೊರೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬ್ರಾಹ್ಮಣರು ಧರ್ಮವನ್ನು ಕೈಬಿಡದೇ ಧರ್ಮ ಸಾಧನೆ ಜತೆಗೆ ಲೌಕಿಕ ಬದುಕಿನಲ್ಲಿಯೂ ಪ್ರಗತಿಯ ಮೆಟ್ಟಿಲು ಏರುವ ಕಾರ್ಯ ಮಾಡಬೇಕೆಂದರು.
ಸಹಕಾರ ಭರವಸೆ: ಮುಖ್ಯ ಅತಿಥಿ ಎಂಎಲ್ಸಿ ಎನ್.ಎಸ್. ಬೋಸರಾಜು ಸನ್ಮಾನ ಸ್ವೀಕರಿಸಿ ಮಾತನಾಡಿ, ಬ್ರಾಹ್ಮಣ ಸಮಾಜದ ಪ್ರಗತಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಅಗತ್ಯ ಸಹಕಾರ ದೊರಕಿಸುವ ಭರವಸೆ ನೀಡಿದರು.
ಶಾಸಕ ಡಾ. ಶಿವರಾಜ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಬ್ರಾಹ್ಮಣ ಸಮಾಜ ಮತ್ತು ಇತರೆ ಸಮಾಜಗಳ ಪ್ರತಿಭಾವಂತರನ್ನು ಈ ವೇಳೆ ಸನ್ಮಾನಿಸಲಾಯಿತು. ಅದೇ ರೀತಿ ಹಿರಿಯ ಸಾಹಿತಿ ವಿ.ಎಸ್. ಕಾಂತನವರ್ ಅವರಿಗೆ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಬ್ರಾಹ್ಮಣ ಮಹಾಸಭಾದ ವಲಯ ಉಪಾಧ್ಯಕ್ಷ ನರಸಿಂಗರಾವ್ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗುಲ್ಬರ್ಗ ಕೇಂದ್ರೀಯ ವಿವಿಯ ಪ್ರಭಾರಿ ಉಪಕುಲಪತಿ ಡಾ. ಸುಧೀಂದ್ರರಾವ್, ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ, ಡಾ. ಆನಂದತೀರ್ಥ ಫಡ್ನೀಸ್, ನಂಜುಂಡಸ್ವಾಮಿ, ಪ್ರಾಣೇಶ್ ಮುತಾಲಿಕ್ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಬ್ರಾಹ್ಮಣ ಸಮಾಜದ ಜನತೆ ಪಾಲ್ಗೊಂಡಿದ್ದರು.