ಗುಲ್ಬರ್ಗ: ರಾಜ್ಯ ಯುವ ನೀತಿ ಅನುಷ್ಠಾನ ಅಡಿಯಲ್ಲಿ 2014-15ನೇ ಸಾಲಿಗೆ ನಮ್ಮೂರ ಶಾಲೆಗೆ ನಮ್ಮ ಯುವಜನರು ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಕುರಿತು ಜೂನ್-2013 ರಿಂದ ಜುಲೈ-2014 ರ ಅವಧಿಯಲ್ಲಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯ, ಶಾಲಾ ಆವರಣ ಶುಚಿತ್ವ, ಅಗತ್ಯ ಸೌಲಭ್ಯಗಳ ಪೂರೈಕೆ ಮತ್ತು ಶಾಲಾ ಸುತ್ತಲಿನ ಪರಿಸರ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪರಿಣಾಮಕಾರಿಯಾಗಿ ಮತ್ತು ಯಶಸ್ವಿಯಾಗಿ ತೊಡಗಿಸಿಕೊಂಡಿರುವ ಯುವ ಸಂಘ ಮತ್ತು ಸಂಸ್ಥೆಗಳಿಂದ ಪ್ರಸ್ತಾವನೆಯನ್ನು ಆಹ್ವಾನಿಸಲಾಗಿದೆ. ಪ್ರಸ್ತಾವನೆಗಳನ್ನು ದ್ವಿಪ್ರತಿಯಲ್ಲಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗುಲ್ಬರ್ಗ ಇವರಿಗೆ ಆಗಸ್ಟ್ 14 ರೊಳಗೆ ಸಲ್ಲಿಸಲು ಕೋರಲಾಗಿದೆ. ಮಾಹಿತಿಗೆ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಮೂಢನಂಬಿಕೆ ಕಾಯ್ದೆ ಜಾರಿ ಒತ್ತಾಯಕ್ಕೆ ನಿರ್ಣಯ
ಸಿಂಧನೂರು: ರಾಜ್ಯ ಸರ್ಕಾರದ ಮುಂದಿರುವ ಮೂಢನಂಬಿಕೆ ಪ್ರತಿಬಂಧಕ ವಿಧೇಯಕವನ್ನು ಶೀಘ್ರವೇ ಜಾರಿಗೊಳಿಸಲು ಒತ್ತಾಯಿಸುವುದು ಸೇರಿದಂತೆ ವಿವಿಧ ನಿರ್ಣಯಗಳನ್ನು ಮನುಜಮತ ಬಳಗದಿಂದ ಏರ್ಪಡಿಸಿದ್ದ ಪವಾಡ ಬಯಲು ಕಾರ್ಯಕ್ರಮದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಬಳಗದ ಅಧ್ಯಕ್ಷ ಡಿ.ಎಚ್. ಕಂಬಳಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ ತಿಳಿಸಿದ್ದಾರೆ. ಈ ಹೇಳಿಕೆ ನೀಡಿರುವ ಅವರು, ರಾಜ್ಯದಾದ್ಯಂತ ಮೂಢನಂಬಿಕೆ ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಶಿಕ್ಷಣ ಇಲಾಖೆಯ ಮುಖಾಂತರ ಧನಸಹಾಯವನ್ನು ಒದಗಿಸಿ ಹುಲಿಕಲ್ ನಟರಾಜ್ ಮತ್ತವರ ತಂಡಕ್ಕೆ ಅಧಿಕೃತ ಜವಾಬ್ದಾರಿ ನೀಡಿ ಜಾಗೃತಿ ಕಾರ್ಯಕ್ರಮಗಳನ್ನು ಪ್ರಚುರಪಡಿಸುವುದು, ಪವಾಡಗಳ ಹಿಂದಿನ ಸತ್ಯವನ್ನು ಸಾರ್ವಜನಿಕರಿಗೆ ಬಹಿರಂಗ ಸಭೆಗಳಲ್ಲಿ ತೋರಿಸಿಕೊಡುತ್ತಿರುವುದರಿಂದ ಕೆಲ ಸಂಪ್ರದಾಯವಾದಿಗಳು ಅವರ ಮೇಲೆ ದಾಳಿ ನಡೆಸಿ ಹಲ್ಲೆಗೆ ಮುಂದಾಗುತ್ತಿದ್ದಾರೆ. ಅವರಿಗೆ ಸೂಕ್ತ ಭದ್ರತೆ ಒದಗಿಸುವುದು, ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಸಂಬಂಧಿಸಿದಂತೆ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸುವ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.