2 ಸಂಧಾನ ವಿಫಲ ನೇ ದಿನಕ್ಕೆ ಧರಣಿ

Updated on: 

ಕ.ಪ್ರ. ವಾರ್ತೆ    ರಾಯಚೂರು    ಜೂ. 24
ದೇವದುರ್ಗ ತಾಲೂಕಿನ ಪಲಕನಮರಡಿ ಗ್ರಾಪಂ ವಸತಿ ಯೋಜನೆಯಡಿ ನಡೆದಿದೆ ಎನ್ನಲಾದ ಹಗರಣದ ತನಿಖೆಗೆ ಆಗ್ರಹಿಸಿ ದಸಂಸ ಕಾರ್ಯಕರ್ತರು ನಡೆಸುತ್ತಿರುವ ಜಿಪಂ ಎದುರಿನ ಧರಣಿ ಸ್ಥಳಕ್ಕೆ ಮಂಗಳವಾರ ಜಿಪಂ ಸಿಇಒ ವಿಜಯ ಜೋತ್ಸ್ನಾ ಭೇಟಿ ನೀಡಿ ನಡೆಸಿದ ಸಂಧಾನ ವಿಫಲವಾಯಿತು. ಪರಿಣಾಮ ಧರಣಿ ಎರಡನೇ ದಿನವೂ ಮುಂದುವರಿಯಿತು.
ಪ್ರತಿಭಟನಾ ಸ್ಥಳಕ್ಕೆ ಸಿಇಒ ಮಂಗಳವಾರ ಭೇಟಿ ನೀಡಿ ಸಂಘಟನೆ ಮುಖಂಡರೊಂದಿಗೆ ಮಾತುಕತೆ ನಡೆಸಿದ ವೇಳೆ ಗ್ರಾಪಂನಲ್ಲಿ ವಸತಿ ಯೋಜನೆಯಡಿ ನಡೆದ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸಿ, ವಸತಿ ಯೋಜನೆಯಡಿಯ ಫಲಾನುಭವಿಗಳಿಗೆ ಚೆಕ್ ವಿತರಿಸಬೇಕೆಂದು ಹೋರಾಟಗಾರರು ಒತ್ತಾಯಿಸಿದರು.
ಅಸಮಾಧಾನ: ಈ ವೇಳೆ ಪ್ರತಿಕ್ರಿಯಿಸಿದ ಸಿಇಒ ವಿಜಯ ಜೋತ್ಸ್ನಾ, ವಸತಿ ಯೋಜನೆಯ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಫಲಾನುಭವಿಗಳಿಗೆ ಅನುದಾನದ ಚೆಕ್ ನೀಡುವುದು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದರು.
ಇದರಿಂದ ತೀವ್ರ ಅಸಮಾಧಾನಗೊಂಡ ಹೋರಾಟಗಾರರು ಹಗರಣದಲ್ಲಿ ಭಾಗಿಯಾದವರ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ವಸತಿ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಿಸುವ ಕುರಿತು ಲಿಖಿತ ಭರವಸೆ ನೀಡಿದಲ್ಲಿ ಮಾತ್ರ ಹೋರಾಟ ಹಿಂಪಡೆಯಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕೇಸ್ ದಾಖಲಿಸುವ ಅಧಿಕಾರವಿಲ್ಲ: ಸಿಇಒ ಮಾತನಾಡಿ, ಪ್ರಕರಣ ದಾಖಲಿಸುವ ಅಧಿಕಾರ ತಮಗಿಲ್ಲ. ಜತೆಗೆ ಫಲಾನುಭವಿಗಳಿಗೆ ಚೆಕ್ ನೀಡುವುದು ಸರ್ಕಾರದ ವ್ಯಾಪ್ತಿಯ ವಿಚಾರವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಪತ್ರ ಬರೆಯಬಹುದೇ ವಿನಾ ಅದಕ್ಕಿಂತ ಹೆಚ್ಚಿನದು ಏನನ್ನೂ ಮಾಡಲಾಗದು ಎಂದರು. ಇದರಿಂದ ಬೇಸರಗೊಂಡ ದಸಂಸ ಹೋರಾಟಗಾರರು ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ವಸತಿ ಯೋಜನೆ ಅಡಿ ಮನೆ ಕಟ್ಟಿಕೊಂಡ ಫಲಾನುಭವಿಗಳಿಗೆ ಕೂಡಲೇ ಚೆಕ್ ನೀಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಗೊಳಿಸಿ ಧರಣಿ ಮುಂದುವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com