ಮಾವಿನ ಕೆರೆಗೆ ತ್ಯಾಜ್ಯ ಮುಳುವು

Updated on: 

 ಜಗನ್ನಾಥ ಆರ್. ದೇಸಾಯಿ
ರಾಯಚೂರು: ನಗರದ ಎಲ್ಲ ಕಟ್ಟಡಗಳ ತ್ಯಾಜ್ಯ, ಕಸಕ್ಕೆ ಇದು ವಿಲೇವಾರಿ ಕೇಂದ್ರ. ವಾಯು ವಿಹಾರಕ್ಕೂ ಇದೇ ತಾಣ. ಪ್ರಾಣಿಗಳು ಸತ್ತರೂ ಇಲ್ಲೇ ವಿಲೇವಾರಿ. ಹಳೆಯ ಬಟ್ಟೆ, ಸವೆದ ಟೈರುಗಳು, ಕೊಳಕು ವಸ್ತುಗಳು ಹೀಗೆ ಎಲ್ಲವೂ ಇಲ್ಲಿ ಯತೇಚ್ಛವಾಗಿ ಕಾಣಸಿಗುತ್ತದೆ.
ಇದನ್ನು ನಗರದ ಮಾವಿನಕೆರೆ ಎಂದು ಕರೆಯಿಸಿಕೊಂಡಿರುವ ಬೃಹತ್ ಕಸದ ಎಂತಲೂ ಕರೆಯಬಹುದು.
ನಗರದ ಮಧ್ಯಭಾಗದಲ್ಲಿಯೇ ಮಾವಿನಕೆರೆಯಿದೆ. ಒತ್ತುವರಿಯ ಮಧ್ಯೆಯೂ ಈಗಲೂ ಮಾವಿನ ಕೆರೆಯಾಗಿ ಉಳಿದಿದ್ದು ರಾಯಚೂರಿಗರ ಸೌಭಾಗ್ಯ. ಕೆರೆಯ ಒಂದು ಮಗ್ಗುಲಿಗೆ ನಗರಸಭೆಯೇ ಸೌಂದರ್ಯೀಕರಣ ಕೈಗೊಂಡಿದೆ. ಮತ್ತೊಂದೆಡೆ ನಗರದ ಎಲ್ಲ ರೀತಿಯ ತ್ಯಾಜ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕೆರೆ ಸಂರಕ್ಷಿಸುವ ಕಾರ್ಯ ನಡೆದಿಲ್ಲ ಎಂಬುದು ಸ್ಪಷ್ಟ.
ಅಕ್ರಮ ಕಟ್ಟಡದ ತ್ಯಾಜ್ಯ: ನಗರದಲ್ಲಿ ಕಳೆದ ಅನೇಕ ವರ್ಷಗಳಿಂದ ನಡೆದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಮತ್ತು ಹಳೆಯ ಮನೆಗಳ ತೆರವಿ ನಿಂದುಂಟಾಗುವ ಕಟ್ಟಡದ ತ್ಯಾಜ್ಯ ವಿಲೇವಾರಿಗೆ ನಗರದ ಮಾವಿನ ಕೆರೆ ಅತೀ ಪ್ರಶಸ್ತ ಸ್ಥಳ ಎಂಬುದು ಹೆಚ್ಚು ಜನಜನಿತ. ನಗರದ ನಿವಾಸಿಗಳು ಕೆರೆಯನ್ನು ಕೊಳಕು ಮಾಡುವಲ್ಲಿ ಹೆಚ್ಚು ಕೊಡುಗೆ ನೀಡಿದ್ದಾರೆಂದೇ ಹೇಳಬಹುದು. ಅದಕ್ಕೆ ನಗರ ಸಭೆಯೂ ಮುಕ್ತ ಅವಕಾಶ ಕಲ್ಪಿಸಿ ಪರಿಸರ ಹಾಳುಗೆಡವಲೂ ನೆರವಾಗಿದೆ.
ಕೆರೆ ನರಕ: ದಿನವೂ ಮಾವಿನಕೆರೆಗೆ ಟ್ರ್ಯಾಕ್ಟರ್‌ನಲ್ಲಿ ಹಗಲು ರಾತ್ರಿಯೆನ್ನದೆ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಪರಿಣಾಮ ಕೆರೆ ಹಾಳಾಗಿದೆ. ಈಗ ಕೆರೆಯ ಏರಿ ಮೇಲೂ ಸಹ ತ್ಯಾಜ್ಯ ವಿಲೇವಾರಿಯಾಗುತ್ತಿದೆ. ಕಸದ ವಿಲೇವಾರಿಯಿಂದಾಗಿ ಮಾವಿನ ಕೆರೆ ಏರಿಯ ಮೇಲಿನ ರಸ್ತೆಯ ಸಂಚಾರ ಕೆಲ ಬಾರಿ ನರಕಕ್ಕೆ ಸಮಾನವಾಗುತ್ತದೆ. ಮಾವಿನ ಕೆರೆಯ ಬಳಿಯೇ ನಗರ ಆರೋಗ್ಯ ಕೇಂದ್ರವಿದ್ದು, ದಿನವೂ ನೂರಾರು ಸಂಖ್ಯೆಯ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ಅವರೆಲ್ಲರೂ ಇಂತಹ ಅನಾರೋಗ್ಯಕರ ವಾತಾವರಣದಲ್ಲಿಯೇ ದಿನದೂಡುತ್ತಿದ್ದಾರೆ. ಈ ಆರೋಗ್ಯ ಕೇಂದ್ರದಲ್ಲಿ ವಿವಿಧ ಶಸ್ತ್ರಚಿಕಿತ್ಸೆಗಳನ್ನು ವೈದ್ಯರು ನಡೆಸುತ್ತಾರೆ. ಆನಂತರ ರೋಗಿಗಳು ಸಂಪೂರ್ಣ ಚೇತರಿಸಿಕೊಂಡು ಮನೆ ಸೇರುವವರೆಗೆ ಕೊಳಕು ವಾಸನೆ ಅನುಭವಿಸಲೇಬೇಕು.


ಸತ್ತ ಪ್ರಾಣಿಗಳು


ನಗರದಲ್ಲಿ ಎಲ್ಲಿ ಯಾವುದೇ ಸಾಕು ಪ್ರಾಣಿ ಸತ್ತರೂ ಅದರ ವಿಲೇವಾರಿ ಕೇಂದ್ರವಾಗಿ ಮಾವಿನ ಕೆರೆಯ ಏರಿ ಬಳಕೆಯಾಗುತ್ತಿದೆ. ಕೊಳೆತು ನಾರಿ ಶವ ಸಂಪೂರ್ಣ ಕರಗಿ ಹೋಗುತ್ತದೆಯೇ ವಿನಾ ಅದರ ಸಾಗಣೆಗೆ ಆಡಳಿತದ ಕ್ರಮ ಜರುಗುವುದಿಲ್ಲ. ಪರಿಣಾಮ ಕೆರೆಯ ಏರಿ ಮೇಲಿನ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಓಡಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಮಾವಿನ ಕೆರೆಯ ಬಳಿಯೇ ಇರುವ ಖಾಸ್ ಬಾವಿ, ಜವಾಹರ ನಗರದಲ್ಲಿರುವ ಹಳೆಯ ಬಾವಿಗಳು ತ್ಯಾಜ್ಯ ವಿಲೇವಾರಿಗೆ ತಾಣಗಳಾಗಿವೆ. ಜನರಿಗೆ ಸ್ವಚ್ಛತೆ ಪ್ರಜ್ಞೆ ಕೊರತೆಯಾದರೆ ನಗರಸಭೆಗೆ ಜಾಣಕುರುಡು.


ಸೌಂದರ್ಯಕ್ಕೆ ಒತ್ತು


ನಗರಸಭೆ ಮಾವಿನ ಕೆರೆಯ ಸೌಂದರ್ಯಕ್ಕೆ ಒತ್ತು ನೀಡಿದೆ. ಸುಂದರ ಉದ್ಯಾನವನ ಕೆರೆಯ ಬಳಿಯೇ ನಿರ್ಮಿಸಿದೆ. ಆದರೆ ಮಾವಿನ ಕೆರೆಯಲ್ಲಿ ಹಾಗೂ ಅದರ ಸುತ್ತಲಿನ ಪರಿಸರದಲ್ಲಿ ಆಗುತ್ತಿರುವ ತ್ಯಾಜ್ಯದ ಸಂಗ್ರಹ ತಡೆಗೆ ಅಸಡ್ಡೆ ತೋರಿದೆ. ಹಿಂದೊಮ್ಮೆ ಮಾವಿನ ಕೆರೆ ಬಳಿ ತ್ಯಾಜ್ಯ ವಿಲೇವಾರಿ ಮಾಡದಂತೆ ಗಮನ ಹರಿಸಲಾಗಿತ್ತು. ಅದರ ತಡೆಗೆ ಎಚ್ಚರಿಕೆ ನೀಡಿ ಸಿಬ್ಬಂದಿಯನ್ನು ಕೆಲ ದಿನ ನಿಯೋಜಿಸಲಾಗಿತ್ತು. ಆದರೆ ಆನಂತರದಲ್ಲಿ ಮತ್ತೆ ಮಾವಿನ ಕೆರೆಯ ಸ್ವಚ್ಛತೆ ಆಡಳಿತ ಮರೆಯಿತು. ಕೆರೆ ಮೊದಲಿನಂತೆಯೇ ತ್ಯಾಜ್ಯ ವಿಲೇವಾರಿ ಕೇಂದ್ರವಾಯಿತು. ಮಾವಿನ ಕೆರೆಯನ್ನು ಹಾಗೂ ಅದರ ಸುತ್ತಲಿನ ಸುಂದರ ಪರಿಸರವನ್ನು ಸಂರಕ್ಷಿಸಿ ಕಾಪಾಡಿಕೊಂಡು ಹೋಗುವ ಕಾರ್ಯ ಆಗುವುದು ಯಾವಾಗ ಎಂಬ ಪ್ರಶ್ನೆ ಜನರದ್ದು. ನಗರಸಭೆಯ ಆಡಳಿತ ಮಾತ್ರ ಮೌನಕ್ಕೆ ನಿರಂತರ ಶರಣಾದಂತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com