ಕ.ಪ್ರ. ವಾರ್ತೆ ರಾಯಚೂರು ಜೂ. 28
ಇಲ್ಲಿನ ನಗರಸಭೆ ಅಧ್ಯಕ್ಷ ಮಹಾದೇವಿ ನಾಯಕ ಅವರು ತಮ್ಮ ವಿರುದ್ಧ ಸಾಮಾನ್ಯ ಸಭೆಯಲ್ಲಿ 41 ಹೆಚ್ಚುವರಿ ಅಂಶಗಳ ಸೇರ್ಪಡೆ ಸೇರಿದಂತೆ ಮಾಡಿದ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಅವರು ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ಒದಗಿಸುವ ಕಾರ್ಯ ಮಾಡಿದ್ದಾರೆಂದು ನಗರಸಭೆಯ ಸದಸ್ಯರ ನಿಯೋಗ ಆರೋಪಿಸಿದೆ.
ಈ ಕುರಿತು ನಗರದಲ್ಲಿ ಶನಿವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಗರಸಭೆಯ ಹಿರಿಯ ಸದಸ್ಯ ಜಯಣ್ಣ ನೇತೃತ್ವದ 30 ಸದಸ್ಯರ ನಿಯೋಗವು ದೂರು ಸಲ್ಲಿಸಿ, ನಗರಸಭೆ ಅಧ್ಯಕ್ಷೆ ಮಹಾದೇವಿ ನಾಯಕ ಅವರು ಈಚೆಗೆ ಮೌನ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಮಾಡಿದ ಎಲ್ಲ ಆರೋಪಗಳು ವಾಸ್ತವಾಂಶದಿಂದ ಕೂಡಿಲ್ಲ ಎಂದು ದೂರಿದರು.
ನಗರಸಭೆಯ ಯಾವುದೇ ಸದಸ್ಯರು ರಜೆಯ ಮೇಲೆ ತೆರಳುವಂತೆ ಅಧ್ಯಕ್ಷರನ್ನು ಒತ್ತಾಯಿಸಿಲ್ಲ. ಕಳೆದ 4 ತಿಂಗಳಿಂದ ಅವರಿಗೆ ವಾಹನ ಸೌಲಭ್ಯ ನೀಡದೇ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿರುವುದಕ್ಕೆ ಸರ್ಕಾರ ಅಧಿಕಾರಿಗಳು ಉತ್ತರಿಸಬೇಕೇ ವಿನಾ ನಗರಸಭೆಯ 30 ಸದಸ್ಯರಲ್ಲ ಎಂಬುದನ್ನು ಅರಿಯಬೇಕಿದೆ ಎಂದು ಹೇಳಿದರು.
ನೀತಿಸಂಹಿತೆ ಹಿನ್ನೆಲೆ ಸಭೆ ಕರೆಯಲಾಗಿಲ್ಲ: ಅಧ್ಯಕ್ಷೆ ಮಹಾದೇವಿ ನಾಯಕ ಅವರ ರಜೆ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಪದ್ಮಾ ಶ್ರೀನಿವಾಸ್ ಅವರು ಪ್ರಭಾರಿ ವಹಿಸಿಕೊಂಡು ಬಜೆಟ್ ಮಂಡನೆ ಸಭೆ ನಡೆಸಿದ್ದು ಆನಂತರದಲ್ಲಿ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯ ಹಿನ್ನೆಲೆಯಲ್ಲಿ ಸಭೆಗಳನ್ನು ಮತ್ತೆ ಕರೆಯಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ನಗರಸಭೆಯ ಪೌರಾಯುಕ್ತರು ಸದಸ್ಯರಿಗೆ ನಿಷ್ಠರೆಂದು ಅಧ್ಯಕ್ಷರು ಆರೋಪಿಸಿದ್ದು, ಪೌರಾಯುಕ್ತರಾಗಿದ್ದ ಬಸಪ್ಪ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೇ ಬೇರೊಬ್ಬರನ್ನು ನೇಮಿಸಿದ್ದಾರೆಂಬುದು ವಾಸ್ತವ. ನಗರಸಭೆಯ ದೈನಂದಿನ ಆಡಳಿತವನ್ನು ಹಿಡಿತದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವುದು ನಗರಸಭೆಯ ಅಧ್ಯಕ್ಷರು ಹಾಗೂ ಪೌರಾಯುಕ್ತರ ಕರ್ತವ್ಯವಾಗಿದೆ. ಸದಸ್ಯರಿಗೆ ಇದು ಸಂಬಂಧವಿಲ್ಲದ ವಿಚಾರವಾಗಿದೆ ಎಂದು ಹೇಳಿದರು.
ನಗರದ ಸಮಗ್ರ ಪ್ರಗತಿಯ ದೃಷ್ಟಿಯಿಂದ ಸದಸ್ಯರೆಲ್ಲರೂ ಸಹಕರಿಸಲು ಪ್ರಾಮಾಣಿಕವಾಗಿ ಕೇಳಿಕೊಂಡಿದ್ದಲ್ಲಿ ಅದಕ್ಕೆ ತಮ್ಮ ಬೆಂಬಲವಿದೆ ಎಂದ ಸದಸ್ಯರು, ಆಡಳಿತ ನಿರ್ವಹಣೆಯ ಕಾರ್ಯ ನಗರಸಭೆ ಅಧ್ಯಕ್ಷೆ ಹಾಗೂ ಪೌರಾಯುಕ್ತರದ್ದಾಗಿದೆ ಎಂಬುದು ಅಷ್ಟೇ ಸತ್ಯ ಎಂದರು.
ಅಧ್ಯಕ್ಷರಿಂದ ಬ್ಲ್ಯಾಕ್ಮೇಲ್ ತಂತ್ರ: ಜ.31ರಂದು ನಡೆದ ಸಾಮಾನ್ಯ ಸಭೆಗೆ ಸಂಬಂಧಿಸಿ ಅಧ್ಯಕ್ಷೆ ಮಹಾದೇವಿ ನಾಯಕ ಅವರು 41 ಟೇಬಲ್ ಅಜೆಂಡಾಗಳನ್ನು ಪೌರಾಯುಕ್ತರು ಮತ್ತು ನಗರಸಭೆಯ ಅಧ್ಯಕ್ಷರೇ ಸದಸ್ಯರ ಪ್ರಸ್ತಾವನೆಯಂತೆ ಅನುಮೋದಿಸಿ ಸಭೆ ಮುಂದಿರಿಸಿದ್ದಾರೆ. ಸಭೆಯಲ್ಲಿ ಸದಸ್ಯರು ಮಂಡಿಸಿದ ವಿಚಾರಗಳಿಗೆ ಅಧ್ಯಕ್ಷರೂ ಸೇರಿ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಅಧ್ಯಕ್ಷರೇ ಕಡತಕ್ಕೆ ಸಹಿ ಮಾಡಿ ಅನುದಾನ ಒದಗಿಸಲು ಒಪ್ಪಿದ್ದರೂ 41 ಅಂಥ ಅಂಶಗಳ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಸದಸ್ಯರು ಪ್ರಶ್ನಿಸಿದರು.
ಅಏಶ್ವಾಸ ಅರ್ಜಿಗೆ ಈಗಲೂ ಬದ್ಧ: ನಗರಸಭೆಯ 30 ಸದಸ್ಯರು ಮಂಡಿಸಿದ ಅವಿಶ್ವಾಸ ಅರ್ಜಿಗೆ ಈಗಲೂ ತಾವು ಬದ್ಧರಾಗಿದ್ದು, ಅಧ್ಯಕ್ಷರು ಅವಿಶ್ವಾಸ ಕುರಿತ ಸಭೆ ಕರೆಯಬೇಕು. ಅವರು ಕರೆಯದಿದ್ದರೆ ಉಪಾಧ್ಯಕ್ಷರು ಕರೆಯಲಿದ್ದಾರೆ. ಸರ್ಕಾರ ನಿಗದಿ ಮಾಡಿದ ಮೀಸಲಾತಿಯ ವಿರೋಧಿಗಳು ತಾವಲ್ಲ. ಹಾಗೆಯೇ ಮಹಿಳಾ ಅಧ್ಯಕ್ಷರು ಎಂಬ ಕಾರಣಕ್ಕೆ ಕಿರುಕುಳ ನೀಡುತ್ತಿಲ್ಲ ಎಂಬುದನ್ನು ಜಿಲ್ಲಾಡಳಿತ ಅರಿಯಬೇಕಿದೆ ಎಂದು ಅವರು ಹೇಳಿದರು.
ಉಪಾಧ್ಯಕ್ಷೆ ಪದ್ಮಾ ಶ್ರೀನಿವಾಸ್, ಸದಸ್ಯರಾದ ದೊಡ್ಡಮಲ್ಲೇಶಪ್ಪ, ನರಸಪ್ಪ ಯಕ್ಲಾಸಪುರ ಎಂ.ಪವನ್ಕುಮಾರ್, ಮಹೆಬೂಬ್ ಹುಸೇನ್, ಇ.ವಿನಯಕುಮಾರ್, ಹರೀಶ್ ನಾಡಗೌಡ, ಸೀಮಾ ಸದಾಫ್, ಅಂಜಿನಯ್ಯ ಸೇರಿದಂತೆ ಅನೇಕರಿದ್ದರು.