ಶಿವಮೊಗ್ಗ: ಮಾಧ್ಯಮಗಳು ಸುದ್ದಿಯೊಂದಿಗೆ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಉಪನ್ಯಾಸಕ ಡಾ. ಬಾಲಕೃಷ್ಣ ಹೆಗಡೆ ಅಭಿಪ್ರಾಯಪಟ್ಟರು.
ಶಿವಮೊಗ್ಗ ತಾಲೂಕಿನ ಮುದುವಾಲ ಗ್ರಾಮದಲ್ಲಿ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜು ಹಾಗೂ ಡಿವಿಎಸ್ ಸಂಜೆ ಕಾಲೇಜು ಆಶ್ರಯದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನದಲ್ಲಿ ಮಾಧ್ಯಮದ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮಾಧ್ಯಮಗಳು ಮಾಹಿತಿಯೊಂದಿಗೆ ವ್ಯಕ್ತಿಯ ಮನೋವಿಕಾಸಕ್ಕೂ ಸಹಕಾರಿಯಾಗುತ್ತದೆ. ಸುದ್ದಿ ಪ್ರಕಟವಾಗುವ ಸ್ವರೂಪದಲ್ಲಿ ಮಾಧ್ಯಮಗಳು ಬದಲಾಗಿರಬಹುದು. ಆದರೆ ಅದರಲ್ಲಿನ ಒಳ್ಳೆ ಅಂಶಗಳನ್ನು ಮಾತ್ರ ಗ್ರಹಿಸಿ ಆಸ್ವಾದಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದ ಅವರು, ಇಂಥ ಸಾಮರ್ಥ್ಯ ಬೆಳೆಸಿಕೊಳ್ಳುವ ಶಕ್ತಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳ ಮೂಲಕ ಅವಕಾಶ ದೊರೆಯುತ್ತದೆ ಎಂದರು.
ಶಿಬಿರದಲ್ಲಿ ವಿದ್ವಾನ್ ಮಂಜುನಾಥ ಭಟ್, ಶಿಬಿರಾಧಿಕಾರಿ ಪ್ರೊ.ಕೆ.ಜಿ. ವೆಂಕಟೇಶ್, ಪ್ರೊ. ಪದ್ಮೇಗೌಡ, ಪ್ರೊ. ಸುರೇಶ್, ಉಪನ್ಯಾಸಕ ನವೀನ್ಕುಮಾರ್, ಗ್ರಾಮದ ಮುಖಂಡ ಪ್ರದೀಪಕುಮಾರ್ ಇದ್ದರು.