ಶಿವಮೊಗ್ಗ: ಉದ್ಯಮಿ ಕೆ.ವಿ. ಶಶೀಂದ್ರ(52) ಮಂಗಳವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಗರದ ಬಿ.ಎಚ್. ರಸ್ತೆ ವೀರಭದ್ರೇಶ್ವರ ಚಿತ್ರಮಂದಿರದ ತಿರುವಿನಲ್ಲಿ ಪತ್ನಿಯೊಂದಿಗೆ ಶಶೀಂದ್ರ ಬೈಕಿನಲ್ಲಿ ಬರುತ್ತಿದ್ದಾಗ ಎದುರಿನಿಂದ ಬಂದ ಬೈಕ್ ಡಿಕ್ಕಿಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿತರಾದರೂ, ತೀವ್ರ ರಕ್ತಸ್ರಾವವಾದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ 12 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು. ಈ ಅಪಘಾತದಲ್ಲಿ ಪತ್ನಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಶಿಯವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಪಾರ ಸಂಖ್ಯೆಯ ಅವರ ಸ್ನೇಹಿತ ವೃಂದ ಮತ್ತು ಕುಟುಂಬ ವರ್ಗದವರು, ಆಸ್ಪತ್ರೆಗೆ ಧಾವಿಸಿದ್ದರು.
ಮೃತ ಶಶೀಂದ್ರ ಅವರು ಮಾಜಿ ನಗರಸಭಾ ಸದಸ್ಯೆ ರುಕ್ಮಿಣಿ ವೇದವ್ಯಾಸರ ದ್ವಿತೀಯ ಪುತ್ರ. ಶಶಿಯವರ ನಿಧನಕ್ಕೆ ಕಾಂಗ್ರೆಸ್ ಮುಖಂಡ ಕೆ.ಬಿ. ಪ್ರಸನ್ನಕುಮಾರ್, ಎನ್ಇಎಸ್ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಆರ್. ಪ್ರಸನ್ನಕುಮಾರ್, ಕೆಜೆಪಿ ಮುಖಂಡ ರುದ್ರೇಗೌಡ, ಜ್ಯೋತಿಪ್ರಕಾಶ್ ಸಂತಾಪ ವ್ಯಕ್ತಪಡಿಸಿದ್ದಾರೆ.