ಬಜೆಟ್: ನೂರೆಂಟು ನಿರೀಕ್ಷೆ

Updated on: 

ಶಿವಮೊಗ್ಗ: ಮತ್ತೆ ಆಯವ್ಯಯ ಮಂಡನೆ ಕಾಲ ಬಂದಿದೆ. ಬಿ.ಎಸ್. ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ-ಮುಖ್ಯಮಂತ್ರಿಯಾಗಿದ್ದಾಗ ಭಾರಿ ಪಾಲು ಪಡೆದಿದ್ದ ಶಿವಮೊಗ್ಗ ಜಿಲ್ಲೆಯ ಮೇಲೆ ನಂತರ ಬಂದ ಮುಖ್ಯಮಂತ್ರಿಗಳ ಕೃಪಾಕಟಾಕ್ಷ ಬೀಳಲಿಲ್ಲ. ಶುಕ್ರವಾರ ವಿಧಾನಮಂಡಲದಲ್ಲಿ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಜಿಲ್ಲೆಗೆ ಏನು ಸಿಗಬಹುದು ಎಂಬ ಕುತೂಹಲ ಮೂಡಿದೆ.
ಕಳೆದ ವರ್ಷ ಡಿ.ವಿ. ಸದಾನಂದಗೌಡ ಅವರು ಮಂಡಿಸಿದ್ದ ಮುಂಗಡ ಪತ್ರದಲ್ಲಿ ಸಿಕ್ಕಿದ್ದು ಅರೆಕಾಸಿನ ಮಜ್ಜಿಗೆ ಮಾತ್ರ. ಅವುಗಳಲ್ಲಿ ಅನುಷ್ಠಾನವಾಗಿದ್ದೂ ಕಡಿಮೆಯೇ. ಈಗ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾರೆ. ಜಿಲ್ಲೆಯವರೇ ಆದ ಕೆ.ಎಸ್. ಈಶ್ವರಪ್ಪ ಉಪಮುಖ್ಯಮಂತ್ರಿಯಾಗಿದ್ದಾರೆ. ಚುನಾವಣೆ ಕೆಲವೇ ದಿನಗಳಲ್ಲಿ ಬರಲಿದೆ. ಹಾಗಾಗಿ ಜಿಲ್ಲೆಯ ಜನರ ನಿರೀಕ್ಷೆಗಳೂ ಮೇಲೆದ್ದಿವೆ.
ಹಿಂದೆ ಸಿಕ್ಕಿದ್ದು: ಸದಾನಂದಗೌಡರು ಮಂಡಿಸಿದ ಬಜೆಟ್‌ನಲ್ಲಿ ಶಿವಮೊಗ್ಗ ಎಂಬ ನಾಲ್ಕು ಅಕ್ಷರಗಳು ಪ್ರಸ್ತಾಪವಾಗಿದ್ದು ಒಮ್ಮೆ ಮಾತ್ರ. ಅದೂ ವಿಮಾನ ನಿಲ್ದಾಣ ಶಿವಮೊಗ್ಗದಲ್ಲಿ ಆಗುತ್ತಿದೆ ಎಂದು ಹೇಳುವಾಗ ಮಾತ್ರ. ಇದನ್ನು ಹೊರತುಪಡಿಸಿದರೆ ಸಿಕ್ಕಿದ್ದು ಅತ್ಯಲ್ಪ.
 ಕುಪ್ಪಳಿಯ ಕುವೆಂಪು ಪ್ರತಿಷ್ಠಾನಕ್ಕೆ 5 ಕೋಟಿ ರು., ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ಪಶುವೈದ್ಯ ಕಾಲೇಜಿಗೆ ಒಂದಿಷ್ಟು ನೆರವು, ಶಿಕಾರಿಪುರದಲ್ಲಿ ವಿನೂತನ ಮಾದರಿಯ ಉಗ್ರಾಣದ ಜತೆಗೆ ಸ್ವಚ್ಛ-ವರ್ಗೀಕರಣ ಮಾಡುವ ಉಪಕರಣಗಳೊಂದಿಗೆ ಮೌಲ್ಯವರ್ದಿತ ಚಟುವಟಿಕೆ, ಶಿಕಾರಿಪುರದಲ್ಲಿ ಸಂಚಾರಿ ಕುರಿಗಾಹಿ, ಹಾಸ್ಟೆಲ್ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು.
ಈ ಯೋಜನೆಗಳಲ್ಲಿ ಎಲ್ಲವೂ ಅನುಷ್ಠಾನವಾಗಲಿಲ್ಲ. ತುಂಗ ಮತ್ತು ಗೋಂದಿನಾಲೆಗಳ ಆಧುನೀಕರಣ ಆಗಲೇ ಇಲ್ಲ.
ಇದಕ್ಕೂ ಹಿಂದೆ: ಈ ಹಿಂದೆ ಯಡಿಯೂರಪ್ಪ ಅವರು ಘೋಷಿಸಿದ್ದ ಹಲವು ಯೋಜನೆಗಳೇ ಇನ್ನೂ ಅನುಷ್ಠಾನವಾಗಿಲ್ಲ. ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಅನುಮೋದನೆಯಾದರೂ ಅನುಷ್ಠಾನವಾಗಿಲ್ಲ. ಚಕ್ರಾದಲ್ಲಿ ಅರಣ್ಯ ಮತ್ತು ವನ್ಯಜೀವಿ ಅಧ್ಯಯನ ಕೇಂದ್ರ ಆಗಲಿಲ್ಲ. ಶಿವಮೊಗ್ಗದಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಸಮುಚ್ಚಯ ಟೇಕ್ ಆಫ್ ಆಗಲಿಲ್ಲ. ಹೊರವರ್ತುಲ ರಸ್ತೆ ಚರ್ಚೆಯೇ ನಿಂತುಹೋಗಿದೆ. ಪ್ರವಾಸೋದ್ಯಮ ಯೋಜನೆಗಳು ಅನುಷ್ಠಾನ ಆಗಲಿಲ್ಲ.
ಬೇಡಿಕೆಗಳು: ಜಿಲ್ಲೆಯ ಬೇಡಿಕೆಗಳು ಇನ್ನೂ ಈಡೇರಿಲ್ಲ. ಜಿಲ್ಲೆಯ ಮೂಲಕ ಹಾದುಹೋಗುವ ರಸ್ತೆಗಳ ದುಸ್ಥಿತಿ ಸಾವಿರಾರು ಕೋಟಿ ರು. ಬಳಕೆಯ ನಂತರವೂ ಸುಧಾರಣೆ ಕಂಡಿಲ್ಲ. ಕೃಷಿ ಮತ್ತು ತೋಟಗಾರಿಕೆ ವಿವಿ ಈಗ ತಾನೇ ಶಂಕುಸ್ಥಾಪನೆಯಾಗುತ್ತಿದೆ. ನಂತರದ ಅಭಿವೃದ್ಧಿಗೆ ಅನುದಾನದ ಅಗತ್ಯವಿದೆ.
 ಶಿವಮೊಗ್ಗ-ಹರಿಹರ ರೈಲು ಮಾರ್ಗಕ್ಕೆ ರಾಜ್ಯದ ಪಾಲಿನ ಅನುದಾನ ಬೇಕಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಜಿಲ್ಲೆಯಲ್ಲಿ ಸಾಕಷ್ಟು ಅವಕಾಶವಿದ್ದು, ಇನ್ನಾದರೂ ಹೊಸ ಯೋಜನೆಗಳು ಬರಬೇಕು. ಬಹಳ ಮುಖ್ಯವಾಗಿ ಜಿಲ್ಲೆಯಲ್ಲಿ ಕೃಷಿ ಆದಾರಿತ ಕೈಗಾರಿಕೆಗಳು, ಯುವಜನರಿಗೆ ಉದ್ಯೋಗಾವಕಾಶ ನೀಡುವ ಯೋಜನೆಗಳು ಬೇಕು. ಸುವರ್ಣ ಕೈಗಾರಿಕಾ ಕಾರಿಡಾರ್ಸ್‌ಮರ್ಥವಾಗಿ ಅನುಷ್ಠಾನವಾಗಬೇಕು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಯಾರ್ಯಾರು ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುತ್ತೇನೆಂದು ಭರವಸೆ ನೀಡಿದ್ದರೋ ಅವರೆಲ್ಲಾ ಬರುವಂತಾಗಬೇಕು.
ಜಿಲ್ಲೆಗೆ ಏನೇನು ಸಿಗುತ್ತದೆಂದು ತಿಳಿಯಲು ಇನ್ನು ಕೆಲವೇ ಗಂಟೆಗಳು ಬಾಕಿ ಇವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com