ಭದ್ರಾವತಿ: ಯುವಕರು ನಿರುಪಯುಕ್ತರಲ್ಲ ಆದರೆ ಅವರನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಗುರುವಾರ ಪಟ್ಟಣದ ವೀರಶೈವ ಸಭಾಭವನದಲ್ಲಿ ಕಾಲೇಜು ವಿದ್ಯಾರ್ಥಿಗಳ ಸಂಘ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ- 2013 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತದಲ್ಲಿ ಧರ್ಮ ಜೀವಂತವಾಗಿರುವವರೆಗೆ ಭಾರತ ದೇಶ ಜೀವಂತವಾಗಿರುತ್ತದೆ ಎಂದಿದ್ದರು ಎಂದು ತಿಳಿಸಿ ವಿವೇಕಾನಂದರು ಆತ್ಮವಿಶ್ವಾಸ ಮತ್ತು ಪರಿಶ್ರಮದಲ್ಲಿ ಹೆಚ್ಚು ನಂಬಿಕೆ ಇರಿಸಿದ್ದರು ಎಂದರು.
ಪ್ರತಿಭಾ ಪುರಸ್ಕಾರ: ಇತ್ತೀಚೆಗೆ ನಡೆದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಮೊದಲ ಹತ್ತು ರ್ಯಾಂಕುಗಳನ್ನು ವಿದ್ಯಾರ್ಥಿನಿಯರು ಗಳಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರವನ್ನು ಈ ಸಂದರ್ಭದಲ್ಲಿ ಹಮ್ಮಿಕೊಂಡಿರುವುದು ವಿಶೇಷ ಅರ್ಥ ಕೊಡುತ್ತದೆ ಎಂದರು.
ವಿದ್ಯಾಭ್ಯಾಸ ಕೇವಲ ಹೊಟ್ಟೆ ಹೊರೆಯುವುದಕ್ಕಷ್ಟೇ ಅಲ್ಲ. ಸಮಾಜ ಕಟ್ಟುವ ದಿಕ್ಕಿನಲ್ಲಿ ಮತ್ತು ಹತ್ತು ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಅದರ ಫಲಿತಾಂಶ ಸಾಗಬೇಕು ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಅಧ್ಯಕ್ಷ ಅನಂತರಾಮಯ್ಯ ಮಾತನಾಡಿ, ಭೂಮಂಡಲವಿರುವವರೆಗೆ ವಿವೇಕಾನಂದರ ಹೆಸರು ಅಜರಾಮರವಾಗಿ ಉಳಿಯುವುದೆಂದರು. ಎಳೆಯ ವಯಸ್ಸಿನಲ್ಲಿಯೇ ಸಮಾಜಮುಖಿ ಚಿಂತನೆಯನ್ನು ತಲೆಗೆ ಹಚ್ಚಿಕೊಂಡ ಅವರು ಜನರ ದಾಸ್ಯದ ಪರಾಕಾಷ್ಠೆ ವಿರುದ್ಧ ಹಾಗೂ ಸಾಮಾಜಿಕ ಉನ್ನತಿ ಬಗ್ಗೆ ಯುವಜನರನ್ನು ಬಡಿದೆಬ್ಬಿಸುವ ಕಾರ್ಯವನ್ನು ಮಾಡಿದರು ಎಂದರು.
ಮಾಜಿ ಲೋಕಸೇವಾ ಆಯೋಗದ ಸದಸ್ಯ ರುದ್ರೇಗೌಡ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಾರ್ಮಿಕ ಮುಖಂಡ ಎಸ್.ಎನ್. ಬಾಲಕೃಷ್ಣ, ಡಾ. ಶ್ರೀಮತಿ, ವೀರಯೋಧ ದಿ. ಮುರಳಿ ಅವರ ತಾಯಿ ಸುಧಾಮಣಿ, ವಕೀಲ ಬಿ.ಎಸ್. ರೂಪಪಾವ್, ಅಂಗವಿಕಲ ಉದ್ಯಮಿ ಮಹಾದೇವಪ್ಪ, ರಾಜ್ಯ ಸಾರಿಗೆ ಸ್ವರ್ಣ ಪದಕ ವಿಜೇತ ಕಾರ್ಮಿಕ ನೂರ್ ಅಹಮದ್, ರಂಗಕಲಾವಿದ ಕಲಾಶ್ರೀ ಶಾಮಮೂರ್ತಿ, ಸರ್ಕಾರಿ ಆಸ್ಪತ್ರೆ ಶುಶ್ರೂಶಕಿ ವಿಪುಲ ಮತ್ತು ಶಿಕ್ಷಕ ವೆಂಕಟೇಶ್ ಅವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 138 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೂ ಸನ್ಮಾನಿಸಲಾಯಿತು.
ಸಂಘದ ಗೌರವಾಧ್ಯಕ್ಷ ಎನ್. ವಿಶ್ವನಾಥ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ. ಕದಿರೇಶ್, ಕೂಡ್ಲಿಗೆರೆ ಜಿ.ಎಸ್. ಹಾಲೇಶ್, ಎಸ್.ಎನ್. ಬಾಲಕೃಷ್ಣ ಮೊದಲಾದವರು ಇದ್ದರು. ಸಂಘದ ಅಧ್ಯಕ್ಷ ಚಂದನ್ರಾವ್ ಅಧ್ಯಕ್ಷತೆ ವಹಿಸಿದ್ದರು.