ಸಾಗರ: ಮಾನವೀಯ ಮೌಲ್ಯದ ಆಧಾರದ ಮೇಲೆ ಶಿಕ್ಷಣದ ಮೌಲ್ಯ ನಿರ್ಧಾರವಾಗುತ್ತದೆ ಎಂದು ನಗರಸಭೆ ಸದಸ್ಯೆ ಶರಾವತಿ ಸಿ. ರಾವ್ ಹೇಳಿದರು.
ಧಾರವಾಡದ ವಿದ್ಯಾಪೋಷಕ್ ಸಂಸ್ಥೆ ಪಟ್ಟಣದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಒಂಬತ್ತು ದಿನಗಳ ಕಾಲ ಹಮ್ಮಿಕೊಂಡಿದ್ದ ಉದ್ಯೋಗ ಮಾಹಿತಿ ಶಿಬಿರದ ಸಮಾರೋಪದಲ್ಲಿ ಸೋಮವಾರ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಇಂದಿನ ಶಿಕ್ಷಣ ಕೇವಲ ಅಂಕಗಳಿಸುವತ್ತ ಕೇಂದ್ರೀಕೃತವಾಗುತ್ತಿದೆ. ವಿದ್ಯಾರ್ಥಿಗಳು ಅಂಕ ಗಳಿಸುವುದೇ ನಮ್ಮ ಧ್ಯೇಯ ಎಂದು ಭಾವಿಸಿದ್ದಾರೆ. ಆದರೆ ವಾಸ್ತವದಲ್ಲಿ ಶಿಕ್ಷಣ ನಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ಹೆಚ್ಚಿಸಬೇಕು ಎಂದರು.
ವಿದ್ಯಾಪೋಷಕ್ ಸಂಸ್ಥೆ ಯಾರೂ ಕದಿಯಲಾಗದ ವಿದ್ಯಾಸಂಪತ್ತನ್ನು ಗಳಿಸಲು ನಿಮಗೆ ಆರ್ಥಿಕ ಸಹಾಯ ನೀಡುತ್ತಿದೆ. ಉನ್ನತ ಸ್ಥಾನಕ್ಕೆ ಹೋದ ಮೇಲೆ ನಿಮಗೆ ನೆರವು ನೀಡಿದ ಸಂಸ್ಥೆಯನ್ನು ಮರೆಯದೆ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಿದ್ದಾಪುರ ಶಂಕರಮಠದ ಧರ್ಮಾಧಿಕಾರಿ ವಿಜಯ, ಉತ್ತಮ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಣದ ಗುರಿಯಾಗಬೇಕು. ಶಿಕ್ಷಣದಿಂದ ಜ್ಞಾನ ಹೆಚ್ಚಿಸಿಕೊಳ್ಳುವ ಜೊತೆಗೆ ಸಾಮಾಜಿಕ ಪ್ರಜ್ಞೆಯೂ ಜಾಗೃತಿಗೊಳಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಅವರಲ್ಲಿ ಗುರುಹಿರಿಯರ ಬಗ್ಗೆ ಗೌರವ ಕಡಿಮೆಯಾಗುತ್ತಿರುವುದು ಖೇದದ ಸಂಗತಿ ಎಂದರು.
ಕೆ.ಎನ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಮ.ಸ.ನಂಜುಂಡಸ್ವಾಮಿ, ಕವಲಕೋಡು ವೆಂಕಟೇಶ್ ಇದ್ದರು.