ಸಾಗರ: ಮನಸ್ಸಿನ ದುಗುಡ ನಿವಾರಿಸಿ ಶಾಂತಿಯನ್ನು ಪ್ರತಿಷ್ಠಾಪಿಸುವ ಸಂಗೀತದ ರಸಾನುಭವ ಎಲ್ಲರೂ ಸವಿಯುವಂತಾಗಬೇಕು ಎಂದು ಕರ್ನಾಟಕ ಜನಪದ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಉಸ್ತಾದ್ ಹಮಾಯೂನ್ ಹರ್ಲಾಪುರ ಹೇಳಿದರು.
ಇಲ್ಲಿನ ಮಾಧ್ಯಸಂಘ ಕಲ್ಯಾಣಿ ಕಮಲಾಬಾಯಿ ರಾಮಾಚಾರ್ ಹಾಗೂ ಹನುಮಂತಾಚಾರ್ ಭೀಮಾಚಾರ್ ಪುರೋಹಿತ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ಪುರಂದರೋತ್ಸವ ಉದ್ಘಾಟಿಸಿ ಮಾತನಾಡಿ, ಪುರಂದರ ದಾಸರ ಕೀರ್ತನೆಗಳಲ್ಲಿ ಮನುಷ್ಯನ ನೋವುಗಳಿಗೆ ಅರ್ಥವನ್ನು ಹುಡುಕಿಕೊಡುವ ಹಾಗೂ ಸನ್ಮಾರ್ಗದಲ್ಲಿ ಬದುಕನ್ನು ಸಾಗಿಸುವ ಸಂದೇಶ ಐಕ್ಯವಾಗಿದೆ ಎಂದರು.
ಹುಬ್ಬಳ್ಳಿಯ ಪಂಡಿತ್ ಶ್ರೀಹರಿ ಆಚಾರ್ ವಾಳ್ವೇಕರ್ ಮಾತನಾಡಿ, ಪುರಂದರ ದಾಸರ ಪ್ರತಿ ಕೀರ್ತನೆಯಲ್ಲಿಯೂ ಪರಸ್ಪರ ಸಹಬಾಳ್ವೆ, ಮನುಷ್ಯ ಜನ್ಮ ಸಾರ್ಥಕವಾಗಬೇಕಾದರೆ ಅನುಸರಿಸಬೇಕಾದ ವಿಧಾನಗಳ ಕುರಿತು ಬೋಧನೆಯಿದೆ. ನಿರಂತರ ಚಿಂತನೆ, ಶುದ್ಧ ಮನಸ್ಥಿತಿ ಅಳವಡಿಸಿಕೊಳ್ಳುವುದು ಹಾಗೂ ಸೈದ್ದಾಂತಿಕ ಚಿಂತನೆಯುಳ್ಳ ಪುರಂದರ ದಾಸರ ಕೀರ್ತನೆ ಇನ್ನಷ್ಟು ಪ್ರಸರಿಸುವ ಕೆಲಸವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಂದರ ದಾಸರ ಕೀರ್ತನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಚಲನಚಿತ್ರ ಸಂಗೀತ ನಿರ್ದೇಶಕ ಚಿನ್ಮಯ ಎಂ. ರಾವ್ ಅವರನ್ನು ಸನ್ಮಾನಿಸಲಾಯಿತು.
ಮಾಧ್ವಸಂಘದ ಅಧ್ಯಕ್ಷ ವೇದವ್ಯಾಸಾಚಾರ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎಸ್.ಆರ್. ಕೃಷ್ಣಮೂರ್ತಾಚಾರ್, ಕಲ್ಯಾಣಿ ರಾಜಗೋಪಾಲ್, ರಘುನಂದನ್ ಪುರೋಹಿತ್ ಹಾಜರಿದ್ದರು.