ಸಾಗರ: ಇಲ್ಲಿನ ನಗರಸಭೆಗೆ ನೂತನ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಗುರುವಾರ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಫೆ.16ರಿಂದ ಜಾರಿಗೆ ಬರಲಿದೆ. ಚುನಾವಣೆ ಮುಗಿದ ನಂತರ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಹಿಂದಿನ ಸಾಲಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಹಾಗೂ ಆಸ್ತಿ ತೆರಿಗೆ ಸಂಗ್ರಹ ಉತ್ತಮವಾಗಿದ್ದು, ಈ ಆರ್ಥಿಕ ಸಾಲಿನಲ್ಲಿ ಅದನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕ್ರಮ ಕೈಗೊಳ್ಳಲಾಗುವುದು: ನಗರಸಭೆ ವ್ಯಾಪ್ತಿಯಲ್ಲಿ ಆಶ್ರಯ ನಿವೇಶನ ನೀಡದಿರುವ ಬಗ್ಗೆ ಪ್ರಶ್ನಿಸಿದಾಗ, ಆಶ್ರಯ ನಿವೇಶನಕ್ಕೆ ಜಾಗ ಮಂಜೂರಾತಿ ಕೋರಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇದರ ಜೊತೆಗೆ ಘನತ್ಯಾಜ್ಯ ವಿಲೇವಾರಿ ಘಟಕ ಕಾರ್ಯಾರಂಭ ಮಾಡುವ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ, ಉಪವಿಭಾಗಾಧಿಕಾರಿ ಡಾ.ಬಿ. ಉದಯಕುಮಾರ್ ಶೆಟ್ಟಿ, ತಹಸೀಲ್ದಾರ್ ಆರ್. ರಾಜಣ್ಣ ಹಾಜರಿದ್ದರು.
ಮನವಿ: ತಹಸೀಲ್ದಾರ್ ಕಚೇರಿಯಲ್ಲಿ ಬಗರ್ಹುಕುಂ ಸಾಗುವಳಿ ಹಕ್ಕುಪತ್ರ ವಿತರಣೆ ನೀಡುವಲ್ಲಿ ಆಗುತ್ತಿರುವ ವಿಳಂಬ ಹಾಗೂ ಸಾರ್ವಜನಿಕ ಸೇವೆಯಲ್ಲಿ ಆಗುತ್ತಿರುವ ಅವ್ಯವಸ್ಥೆಯನ್ನು ನಿವಾರಿಸುವಂತೆ ಒತ್ತಾಯಿಸಿ ಗುರುವಾರ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕು ಕಚೇರಿಯಲ್ಲಿ ಬಗರ್ಹುಕುಂ ಸಾಗುವಳಿಯ ನೂರಾರು ಹಕ್ಕುಪತ್ರಗಳು ಸಿದ್ಧವಾಗಿದ್ದು, ಬಗರ್ಹುಕುಂ ಸಮಿತಿಯಲ್ಲಿ ಹಕ್ಕುಪತ್ರ ನೀಡಲು ತೀರ್ಮಾನವೂ ಆಗಿರುತ್ತದೆ. ಆದರೆ ತಹಸೀಲ್ದಾರರು ಹಕ್ಕುಪತ್ರಗಳಿಗೆ ಅನುಮೋದನೆ ನೀಡುತ್ತಿಲ್ಲ. ಹಣ ಕೊಟ್ಟವರಿಗೆ ಮಾತ್ರ ಸಾಗುವಳಿ ಚೀಟಿಗೆ ಸಹಿ ಮಾಡಿ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಶಾಲಾ ಜಮೀನು ಮಂಜೂರಾತಿಗೆ ಸಂಬಂಧಪಟ್ಟಂತೆ 60 ಅರ್ಜಿ, ಸ್ಮಶಾನ ಭೂಮಿ ಮಂಜೂರಾತಿಗೆ ಸಂಬಂಧಪಟ್ಟಂತೆ 70 ಪ್ರಕರಣಗಳು ವಿಲೇವಾರಿಯಾಗದೆ ಬಾಕಿ ಉಳಿದಿದೆ. ತಹಸೀಲ್ದಾರರು ಸರ್ವೆ ಸೂಪರ್ ವೈಸರ್ ಮತ್ತು ಖಾಸಗಿ ದಲ್ಲಾಳಿಗಳ ಮೂಲಕ ಹಣ ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇಂತಹ ಅಧಿಕಾರಿಯನ್ನು ಕೂಡಲೆ ವರ್ಗಾಯಿಸಿ, ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬಗರ್ಹುಕುಂ ಸಮಿತಿ ಸದಸ್ಯ ಆರ್.ಸಿ. ಮಂಜುನಾಥ್, ತಾಲೂಕು ಆರಾಧನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಅದರಂತೆ, ಮಂಡಗಳಲೆ ಗಣಪತಿ, ರಾಜು ಹಾಜರಿದ್ದರು.