ಶಿವಮೊಗ್ಗ: ಗುತ್ಯಪ್ಪ ಕಾಲೋನಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಸಹಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ಎರಡು ದಿನದ ಕಾರ್ಯಾಗಾರ ಏರ್ಪಡಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿರುವ ಅಭ್ಯರ್ಥಿಗಳು ತರಬೇತಿಯಲ್ಲಿ ಪಾಲ್ಗೊಳ್ಳಬಹುದು ಎಂದು ಉದ್ಯೋಗಾಧಿಕಾರಿ ಬಿ.ಎಸ್. ಮನಕಿನಕೊಪ್ಪ ತಿಳಿಸಿದ್ದಾರೆ. ವಿವರಗಳಿಗಾಗಿ- 08182-255293.
ಕಾರ್ಯಕಾರಿ ಸಮಿತಿ ಸಭೆ
ಶಿವಮೊಗ್ಗ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಫೆ.19 ರಂದು ಸಂಘದ ಕಾರ್ಯಕಾರಿ ಸಮಿತಿ ಸಭೆ ಕರೆದಿದೆ. ಅಧ್ಯಕ್ಷ ಮ.ಸ. ನಂಜುಡಸ್ವಾಮಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ನೂತನ ಪದಾಧಿಕಾರಿಗಳನ್ನು ಈ ವೇಳೆ ಆಯ್ಕೆ ಮಾಡಲಾಗುವುದು. ಆಸಕ್ತ ನೌಕರರು ಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ತಿಳಿಸಿದ್ದಾರೆ.
ಚರಕ ಉತ್ಸವ
ಸಾಗರ: ಇಂದಿನ ಬಂಡವಾಳಶಾಹಿ ಪದ್ಧತಿಯನ್ನು ಎದುರಿಸಲು ಬೇಕಾದ ನೈತಿಕಶಕ್ತಿಯನ್ನು ಗಾಂಧಿತತ್ವದಿಂದ ಮಾತ್ರ ಪಡೆಯಲು ಸಾಧ್ಯ ಎಂದು ಮೇಲುಕೋಟೆಯ ಜನಪದ ಸೇವಾ ಟ್ರಸ್ಟಿನ ಸಂತೋಷ ಕೌಲಗಿ ಹೇಳಿದರು.
ತಾಲೂಕಿನ ಹೊನ್ನೇಸರದ ಶ್ರಮಜೀವಿ ಆಶ್ರಮದಲ್ಲಿ ನಡೆಯುತ್ತಿರುವ ಚರಕ ಉತ್ಸವದಲ್ಲಿ ಶನಿವಾರ ಮತ್ತೆಮತ್ತೆ ಗಾಂಧಿ ಎಂಬ ವಿಷಯ ಕುರಿತು ಪ್ರತಿಕ್ರಿಯಿಸಿ, ಎಲ್ಲಿಯವರೆಗೂ ಶ್ರಮ ಸಂಸ್ಕೃತಿ ತನ್ನ ಅರ್ಥವನ್ನು ಕಂಡುಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಗಾಂಧಿ ಕನಸಿನ ಸ್ವರಾಜ್ಯ ಕಲ್ಪನೆ ನನಸಾಗುವುದಿಲ್ಲ ಎಂದು ಹೇಳಿದರು.
ಚಿಂತಕ ವಿ.ಎಸ್.ಶ್ರೀಧರ್, ಪಶ್ಚಿಮದ ನಾಗರೀಕತೆಯಲ್ಲಿ ಹಿಂಸೆ ಹಾಗೂ ಸ್ವಾರ್ಥ ತುಂಬಿದೆ. ನಮ್ಮ ನಾಗರಿಕತೆಯನ್ನು ಸಡಿಲಗೊಳಿಸುತ್ತಿದ್ದ ಪಶ್ಚಿಮದ ನಾಗರಿಕತೆಯನ್ನು ಗಾಂಧೀಜಿ ಕಟುವಾಗಿ ವಿರೋಧಿಸಿಕೊಂಡು ಬಂದಿದ್ದರು. ಪ್ರಸ್ತುತ ಗಾಂಧಿಜಿಯವರ ಸ್ವರಾಜ್ಯ ಕಲ್ಪನೆ ಎಲ್ಲ ಸಮಾಜಕ್ಕೂ ಅಗತ್ಯವಿದೆ ಎಂದು ಹೇಳಿದರು. ಗಾಂಧಿಜಿಯವರ ಹಿಂದ್ ಸ್ವರಾಜ್ ಕೃತಿ ಕುರಿತು ಮಾತನಾಡಿದ ಚಿಂತಕ ಡಿ.ಎಸ್. ನಾಗಭೂಷಣ್, ಐಷಾರಾಮಿ ಬದುಕಿಗೆ ಮಣೆ ಹಾಕಿರುವ ಐಟಿಬಿಟಿ ಉದ್ಯೋಗವೊಂದೇ ಆಧುನಿಕ ನಾಗರಿಕತೆಯ ದೊಡ್ಡ ಕೊಡುಗೆಯಾಗಿದೆ ಎಂದರು. ಅಜೀಂ ಪ್ರೇಮ್ ಜೀ ವಿವಿಯ ಸಮಾಜ ಶಾಸ್ತ್ರ ಉಪನ್ಯಾಸಕ ಚಂದನಗೌಡ ಪ್ರತಿಕ್ರಿಯಿಸಿದರು. ಉಮಾಶಂಕರ್ ಪರಿಯಾಡಿ, ಕೆ.ಪಿ. ಸುರೇಶ್, ಮಮತಾ ಜಿ. ಸಾಗರ್, ಪ್ರಕಾಶ್ ಭಟ್, ಕೃಪಾ, ಪಾಂಡುರಂಗ ಹೆಗಡೆ, ಮನು ಮೈಸೂರು, ಪ್ರಸನ್ನ, ಪ್ರಭಾಕರ್ ಸಾಂಶಿ ಸಂವಾದದಲ್ಲಿ ಪಾಲ್ಗೊಂಡಿದ್ದರು.