ಶಿವಮೊಗ್ಗ: ಶ್ರೀಕಾಶಿ ಸುಮೇರೂ ಪೀಠದ ಶಂಕರಚಾರ್ಯ ನರೇಂದ್ರಾನಂದ ಸರಸ್ವತಿ ಅವರನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿರುವ ಕ್ರಮ ಖಂಡಿಸಿ ಹಿಂದೂ ಸಂಘಟನೆಗಳು ಶನಿವಾರ ಅಪರ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರಿಗೆ ಮನವಿ ನೀಡಿದರು.
ಮಧ್ಯ ಪ್ರದೇಶದ ಸರಸ್ವತಿ ಮಂದಿರದಲ್ಲಿ ವರ್ಷದಲ್ಲಿ ಒಮ್ಮೆ ವಸಂತ ಪಂಚಮಿಯ ದಿನ ಮಾತ್ರ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶವಿದ್ದು, ಈ ಬಾರಿ ವಸಂತ ಪಂಚಮಿ ಶುಕ್ರವಾರ ಬಂದಿರುವುದರಿಂದ ಮುಸಲ್ಮಾನರಿಗೆ ನಮಾಜು ಮಾಡಲು ಅವಕಾಶ ನೀಡಿ, ಹಿಂದೂಗಳಿಗೆ ಪೂಜೆ ಮಾಡವ ಅವಕಾಶವನ್ನು ಅಲ್ಲಿನ ಸರ್ಕಾರ ನಿರಾಕರಿಸಿದೆ. ಇದನ್ನು ವಿರೋಧಿಸುವ ಉದ್ದೇಶದಿಂದ ಹಾಗೂ ಹಿಂದೂಗಳಿಗೆ ನ್ಯಾಯಯುತ ಪೂಜೆ ಸಲ್ಲಿಸಲು ಶ್ರೀಕಾಶಿ ಸುಮೇರೂ ಶಂಕರಚಾರ್ಯ ನರೇಂದ್ರಾನಂದ ಸರಸ್ವತಿ ಸ್ವಾಮೀಜಿ ಸರಸ್ವತಿ ದೇವಾಲಯಕ್ಕೆ ತೆರಳಲು ನಿರ್ಧರಿಸಿದ್ದರು.
ಗೃಹ ಬಂಧನಕ್ಕೆ ಖಂಡನೆ: ಆದರೆ, ತಮ್ಮ ಭಕ್ತರೊಂದಿಗೆ ದೇವಾಲಯಕ್ಕೆ ತೆರಳುವ ಮಾರ್ಗಮಧ್ಯೆ ಸ್ಥಳೀಯ ಪೊಲೀಸರು ಬಂಧಿಸಿ ಗೃಹ ಬಂಧನದಲ್ಲಿರಿಸಿದ್ದಾರೆ ಎಂದು ಆರೋಪಿಸಿದರು.
ಸ್ವಾಮೀಜಿ ಅವರ ಶಿಷ್ಯರನ್ನು ಮಾರ್ಗಮಧ್ಯದಲ್ಲೇ ನಿಲ್ಲಸಿ, ಸ್ವಾಮೀಜಿಗಳ ಮೊಬೈಲ್ ಕಸಿದುಕೊಂಡು ಗುಪ್ತ ಸ್ಥಳದಲ್ಲಿಡಲಾಗಿದೆ. ಇದು ಅಕ್ಷಮ್ಯ ಅಪರಾಧ. ಈ ಘಟನೆ ವಿರೋಧಿಸಿ ಶಂಕರಚಾರ್ಯ ನರೇಂದ್ರಾನಂದ ಸರಸ್ವತಿ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಆದ್ದರಿಂದ ಮಧ್ಯಪ್ರದೇಶ ಸರ್ಕಾರ ಕೂಡಲೇ ಸ್ವಾಮೀಜಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಸಂಘಟನೆ ಪ್ರಮುಖರು ಆಗ್ರಹಿಸಿದರು.
ಈ ವೇಳೆ ಸೋಮಶೇಖರ್, ರಾಘವೇಂದ್ರ ಮತ್ತಿತರರು ಇದ್ದರು.